ಕಾರವಾರ: ಪುತ್ರ ಮತ್ತು ಪತ್ನಿಯನ್ನು ನದಿಗೆ ತಳ್ಳಿ ಉದ್ಯಮಿ ಆತ್ಮಹತ್ಯೆಗೆ ಶರಣಾಗಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಚಿತ್ತಾಕುಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಾರವಾರದ ಗೋಪಶಿಟ್ಟಾ ಮೂಲದ ಶ್ಯಾಮ್ ಪಾಟೀಲ್(45), ಜ್ಯೋತಿ ಪಾಟೀಲ್(38), ದಕ್ಷ(12) ಮೃತ ದುರ್ದೈವಿಗಳು. ಉದ್ಯಮಿ ಪತ್ನಿ ಜ್ಯೋತಿ ಹಾಗೂ ಅವರ ಮಗನ ಮೃತದೇಹ ಕಾರವಾರದ ದೇವಭಾಗ ಬೀಚ್ ಬಳಿ ಪತ್ತೆಯಾಗಿವೆ.
ಇನ್ನು ಶ್ಯಾಮ್ ಪಾಟೀಲ್ ಅವರ ಮೃತದೇಹ ಗೋವಾದ ಕುಕ್ಕಳ್ಳಿ ಪಾಡಿಯಲ್ಲಿ ನೇಣು ಬೀಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಶ್ಯಾಮ್ ಪಾಟೀಲ್ ಶ್ಯಾಮ್ ಇಂಡಸ್ಟ್ರಿಯಲ್ ಕಂಪನಿ ಹೊಂದಿದ್ದು, ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಇದೇ ಕಾರಣದಿಂದ ಹೆಂಡತಿ, ಮಗನನ್ನು ಕಾರವಾರದ ಕಾಳಿ ನದಿಯಲ್ಲಿ ದೂಡಿ ತಾನು ಗೋವಾ ಬಳಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ದೇವಭಾಗದ ಬಳಿ ತೆರಳಿದ ಚಿತ್ತಾಕುಲ ಪೊಲೀಸರು ಮೃತದೇಹವನ್ನು ಜಿಲ್ಲಾ ಆಸ್ಪತ್ರೆ ಶೈತ್ಯಾಗಾರಕ್ಕೆ ಸಾಗಿಸಿದ್ದಾರೆ. ಘಟನೆ ಕುರಿತು ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










