ಪುರುಷ ಸಲಿಂಗಿಗಳಿಗೆ ಮಂಕಿಪಾಕ್ಸ್ ಅಪಾಯ ಹೆಚ್ಚು: ವಿಶ್ವ ಆರೋಗ್ಯ ಸಂಸ್ಥೆ.

62
firstsuddi

ಜಿನೀವಾ: ಪುರುಷ ಸಲಿಂಗಕಾಮಿಗಳು ತಮ್ಮ ಲೈಂಗಿಕ ಸಂಗಾತಿಗಳ ಸಂಖ್ಯೆಯನ್ನು ಕಡಿಮೆಗೊಳಿಸಬೇಕು. ಹೆಚ್ಚು ಜನರೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದರೆ ಅದರ ಅಪಾಯವೂ ಹೆಚ್ಚಾಗಿರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಸೋಂಕು ತಗುಲದಂತೆ ಎಲ್ಲ ಸಂಪರ್ಕಗಳಿಂದ ದೂರವಿರುವುದೇ ಮಂಕಿಪಾಕ್ಸ್ ತಡೆಗಟ್ಟುವ ಪರಿಣಾಮಕಾರಿ ಉಪಾಯವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೋಸ್ ಅಧಾನೋಮ್ ಘೆಬ್ರೆಸಿಯಸ್ ಹೇಳಿದ್ದಾರೆ. ಮಂಕಿಪಾಕ್ಸ್ ಸೋಂಕು ಜಾಗತಿಕ ಆರೋಗ್ಯ ತುರ್ತುಪರಿಸ್ಥಿತಿ ಎಂದು ಕಳೆದ ಶನಿವಾರ ಅವರು ಘೋಷಿಸಿದ್ದರು.

ಪುರುಷರೊಂದಿಗೆ ಲೈಂಗಿಕ ಕ್ರಿಯೆ ನಡೆಸುವ ಪುರುಷರು ಸದ್ಯದ ಪರಿಸ್ಥಿತಿಯಲ್ಲಿ ತಮ್ಮ ಲೈಂಗಿಕ ಸಂಗಾತಿಗಳ ಸಂಖ್ಯೆಯನ್ನು ಕಡಿಮೆ ಮಾಡಬೇಕಿದೆ. ಹಾಗೆಯೇ ಹೊಸ ಸಂಗಾತಿಗಳೊಂದಿಗೆ ಸಂಪರ್ಕ ಬೆಳೆಸುವುದನ್ನು ತಡೆಗಟ್ಟುವ ಬಗ್ಗೆ ಯೋಚಿಸಬೇಕು ಎಂದು ಘೆಬ್ರೆಸಿಯಸ್ ತಿಳಿಸಿದರು.

ಇದುವರೆಗೂ ಪತ್ತೆಯಾಗಿರುವ ಮಂಕಿಪಾಕ್ಸ್ ನ ಎಲ್ಲಾ ಪ್ರಕರಣಗಳಲ್ಲಿ ಶೇ 98 ರಷ್ಟು ಮಂಕಿಪಾಕ್ಸ್ ಪ್ರಕರಣಗಳು ಪುರುಷರೊಂದಿಗೆ ಲೈಂಗಿಕ ಸಂಪರ್ಕ ಇಟ್ಟುಕೊಳ್ಳುವ ಪುರುಷ ಸಲಿಂಗಕಾಮಿಗಳಲ್ಲಿಯೇ ಕಂಡುಬಂದಿವೆ. ಆದರೆ ಇದನ್ನು ಲೈಂಗಿಕವಾಗಿ ಹರಡುವ ಸೋಂಕು ಎಂದು ಅಧಿಕೃತವಾಗಿ ಹೇಳಿಲ್ಲ.

78 ದೇಶಗಳಲ್ಲಿ ಈಗ 18,000ಕ್ಕೂ ಹೆಚ್ಚು ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ದೃಢಪಡಿಸಿದೆ. ಒಟ್ಟು ಪ್ರಕರಣಗಳಲ್ಲಿ ಶೇ.70ರಷ್ಟು ಕೇಸ್ ಗಳು ಯುರೋಪ್ ನಲ್ಲಿ ವರದಿಯಾಗಿದೆ. ಶೇ. 25ರಷ್ಟು ಪ್ರಕರಣಗಳು ಅಮೆರಿಕದಾದ್ಯಂತ ವರದಿಯಾಗಿವೆ.