ಪೊಲೀಸ್ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಗಾಂಜಾ ಮತ್ತಿನಲ್ಲಿದ್ದ ಗ್ಯಾಂಗ್…

69
firstsuddi

ಆನೇಕಲ್ : ಪೊಲೀಸ್ ಸಿಬ್ಬಂದಿ ಮೇಲೆ ಗಾಂಜಾ ಮತ್ತಿನಲ್ಲಿದ್ದ ಗ್ಯಾಂಗ್ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಬೆಂಗಳೂರು ಹೊರವಲಯದ ಆನೇಕಲ್- ಅತ್ತಿಬೆಲೆ ಮುಖ್ಯರಸ್ತೆಯ ದಿನ್ನೂರಿನ ನೀಲಗಿರಿ ತೋಪಿನಲ್ಲಿ ನಡೆದಿದೆ.

ಗಾಂಜಾ ಮತ್ತಿನಲ್ಲಿದ್ದ ವರುಣ್ ಅಲಿಯಾಸ್ ಕೆಂಚ ಮತ್ತು ಈತನ ಗ್ಯಾಂಗ್, ರಾಘವೇಂದ್ರ ಸರ್ಕಲ್ ಬಳಿ ನಡು ರಸ್ತೆಯಲ್ಲಿ ಬೈಕ್ ನಿಲ್ಲಿಸಿಕೊಂಡಿದ್ದರು. ಈ ವೇಳೆ ರಸ್ತೆಯಲ್ಲಿ ಹೋಗುತ್ತಿದ್ದ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ರಂಗನಾಥ್, ಬೈಕ್ ಸೈಡಿಗೆ ಹಾಕಿ ಎಂದು ಹೇಳಿ ಬುದ್ದಿವಾದ ಹೇಳಿದ್ದಾರೆ. ಈ ವೇಳೆ ರಂಗನಾಥ್ ಅವರನ್ನು ಸುತ್ತವರಿದ ಗ್ಯಾಂಗ್, ಅವಾಚ್ಯ ಶಬ್ದಗಳಿಂದ ನಿಂದಿಸಿ ದಿನ್ನೂರು ಕಡೆ ಪರಾರಿಯಾಗಿದ್ದಾರೆ.

ನಿಂದಿಸಿದ ಕಿರಾತಕರನ್ನು ಬೈಕ್ ನಲ್ಲಿ ಹಿಂಬಾಲಿಸಿಕೊಂಡು ರಂಗನಾಥ್ ದಿನ್ನೂರಿನ ನೀಲಗಿರಿ ತೋಪಿನ ಕಡೆಗೆ ಹೋಗುತ್ತಿದ್ದಾಗ ವರುಣ್ ಅಂಡ್ ಗ್ಯಾಂಗ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರವಾಣಿ ಕರೆ ಮಾಡಿದ ರಂಗನಾಥ್ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ಗಂಭೀರ ಗಾಯಗೊಂಡಿದ್ದ ರಂಗನಾಥ್ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈಗಾಗಲೇ ಈ ಗ್ಯಾಂಗ್ ಗಾಂಜಾ ಮಾರಾಟ, ದರೋಡೆ, ಕೊಲೆಯತ್ನ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ವರುಣ ಅಲಿಯಾಸ್ ಕೆಂಚನ ವಿರುದ್ಧ ಹತ್ತಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.