ಬೆಂಗಳೂರು: ಚೀನಾ, ಯುರೋಪಿಯನ್ ರಾಷ್ಟ್ರಗಳು ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ಕೋವಿಡ್ ಅಬ್ಬರ ಹೆಚ್ಚಾಗಿದೆ. ಭಾರತದಲ್ಲೂ ಒಮಿಕ್ರಾನ್ ಉಪತಳಿ ಬಿಎಫ್.7 ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ಬಸ್ ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಮಾಸ್ಕ್ ಕಡ್ಡಾಯ ಮಾಡಲಾಗಿದೆ.
ನಾಳೆಯಿಂದ ಬಿಎಂಟಿಸಿ ಬಸ್ ಗಳಲ್ಲಿ ಪ್ರಯಾಣಿಸಬೇಕಾದರೆ ಮಾಸ್ಕ್ ಕಡ್ಡಾಯವಾಗಿ ಧರಸಬೇಕು. ಒಂದು ವೇಳೆ ಮಾಸ್ಕ್ ಹಾಕಿಲ್ಲ ಅಂದ್ರೆ ಬಸ್ ಹತ್ತುವಂತಿಲ್ಲ. ಈ ಬಗ್ಗೆ ಸಂಚಾರ ನಿಯಂತ್ರಕರು ಮೆಜೆಸ್ಟಿಕ್, ಬಿಎಂಟಿಸಿ ಬಸ್ ಡ್ರೈವರ್, ಕಂಡಕ್ಟರ್ ಗಳಿಗೂ ಗೈಡ್ ಲೈನ್ಸ್ ನೀಡುತ್ತಿದ್ದು, ಮಾಸ್ಕ್ ಧರಿಸುವಂತೆ ಹೇಳುತ್ತಿದ್ದಾರೆ.
ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಂಚಾರ ನಿಯಂತ್ರಕರು, ಇಂದು ಮೊದಲನೇ ದಿನವಾದ್ದರಿಂದ ಎಲ್ಲರಿಗೂ ಸೂಚನೆ ನೀಡಿದ್ದೇವೆ. ನಾಳೆ ಬೆಳಗ್ಗೆ ಮಾಸ್ಕ್ ಹಾಕಿಲ್ಲ ಅಂದ್ರೆ ಬಸ್ ನೊಳಗೆ ಪ್ರವೇಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಮೆಟ್ರೋದಲ್ಲಿ ಸಂಚರಿಸಲು ಸಹ ಮಾಸ್ಕ್ ಕಡ್ಡಾಯಗೊಳಿಸಲು ಬಿಎಂಆರ್ ಸಿಎಲ್ ಮುಂದಾಗಿದೆ. ಇಂದು ಸಂಜೆ ವೇಳೆಗೆ ಮೆಟ್ರೋ ರೈಲಿನಲ್ಲಿ ಮಾಸ್ಕ್ ಕಡ್ಡಾಯ ಆದೇಶ ಹೊರಡಿಸುವ ಸಾಧ್ಯತೆಗಳಿವೆ.










