ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣ: ರೇವಣ್ಣ ಅರ್ಜಿ ತಿದ್ದುಪಡಿಗೆ ಹೈಕೋರ್ಟ್ ಅನುಮತಿ ಸೂಚಿಸಿದೆ.

38

ಬೆಂಗಳೂರು: ಹಾಸನದ ಮಾಜಿ ಸಂಸದನಾದ ಪ್ರಜ್ವಲ್ ರೇವಣ್ಣ ಮೇಲಿನ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಯನ್ನು ಅಪಹರಿಸಿರುವ ಕುರಿತಂತೆ ಶಾಸಕ ಹೆಚ್.ಡಿ.ರೇವಣ್ಣ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿತ್ತು. ಈ ಎಫ್‍ಐಆರ್ ರದ್ದು ಮಾಡುವಂತೆ ಕೋರಿ ರೇವಣ್ಣ ಸಲ್ಲಿಸಿದ್ದ ಅರ್ಜಿಯನ್ನು ತಿದ್ದುಪಡಿ ಮಾಡುವುದಕ್ಕೆ ಇಂದು ಹೈಕೋರ್ಟ್ ಸಮ್ಮತಿ ನೀಡಿದೆ.
ಹೆಚ್.ಡಿ.ರೇವಣ್ಣ ಎಫ್‍ಐಆರ್ ರದ್ದು ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ನಡೆಸಿತು. ಅರ್ಜಿ ವಿಚಾರಣೆ ವೇಳೆ ರೇವಣ್ಣ ಪರ ಹಾಜರಿದ್ದ ಹಿರಿಯ ವಕೀಲ ಸಿ.ವಿ.ನಾಗೇಶ್, ಪ್ರಕರಣ ಸಂಬಂಧ ತನಿಖಾಧಿಕಾರಿಗಳು ಈಗಾಗಲೇ ಆರೋಪಪಟ್ಟಿ ಸಲ್ಲಿಸಿದ್ದಾರೆ. ಆದರೆ, ಅದಕ್ಕೂ ಮುನ್ನವೇ ಅರ್ಜಿ ಸಲ್ಲಿಸಲಾಗಿದೆ. ಹೀಗಾಗಿ, ಅರ್ಜಿ ತಿದ್ದುಪಡಿಗೆ ಅವಕಾಶ ಕೋಡಬೇಕೆಂದು ಕೇಳಿದರು. ಸಿ.ವಿ.ನಾಗೇಶ್ ಅವರ ಮಾತಿಗೆ ಮಣಿದ ಪೀಠ, ಅರ್ಜಿ ತಿದ್ದುಪಡಿಗೆ ಬದಲಾಗಿ ಹೊಸದಾಗಿ ಅರ್ಜಿ ಸಲ್ಲಿಸಲು ಸಲಹೆ ನೀಡಿತು. ಇದಕ್ಕೆ ಸಿ.ವಿ.ನಾಗೇಶ್ ಅವರು ಹೊಸದಾಗಿ ಅರ್ಜಿ ಸಲ್ಲಿಸಬೇಕಾದರೆ ಪ್ರಕ್ರಿಯೆ ಹೊಸದಾಗಿ ಪ್ರಾರಂಭಿಸಬೇಕಾಗುತ್ತದೆ. ಹೀಗಾಗಿ, ಅರ್ಜಿ ತಿದ್ದುಪಡಿಗೆ ಅವಕಾಶ ನೀಡಬೇಕು ಎಂದು ಕೋರಿದರು.
ಇ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ಪರ ಹಾಜರಿದ್ದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರೊ.ರವಿವರ್ಮ ಕುಮಾರ್, ”ಹೊಸದಾಗಿ ಅರ್ಜಿ ಸಲ್ಲಿಸಿದರೆ ಮತ್ತೆ ಹೊಸದಾಗಿ ಆಕ್ಷೇಪಣೆಯನ್ನೂ ಸಲ್ಲಿಸಬೇಕಾಗುತ್ತದೆ. ಹಾಗಾಗಿ ಅರ್ಜಿ ತಿದ್ದುಪಡಿ ಮಾಡುವುದು ನ್ಯಾಯಾಲಯಕ್ಕೆ ಬಿಟ್ಟ ವಿಚಾರ. ಅಲ್ಲದೆ, ತಿದ್ದುಪಡಿ ಅರ್ಜಿಗೂ ಆಕ್ಷೇಪಣೆ ಸಲ್ಲಿಸಲಾಗುವುದು” ಎಂದು ತಿಳಿಸಿದರು. ಇಬ್ಬರ ವಾದ ಆಲಿಸಿದ ನ್ಯಾಯಪೀಠ, ಮುಂದಿನ 10 ದಿನಗಳಲ್ಲಿ ಅರ್ಜಿಯನ್ನು ತಿದ್ದುಪಡಿ ಮಾಡುವುದಕ್ಕೆ ಅವಕಾಶ ನೀಡಿ ವಿಚಾರಣೆಯನ್ನು ನವೆಂಬರ್ 15ಕ್ಕೆ ಮುಂದೂಡಿತು.