ಬೆಂಗಳೂರು: ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯಾಗಿರುವ ಸಂಸದ ಪ್ರಜ್ವಲ್ ರೇವಣ್ಣ ಇಂದು ಮಧ್ಯರಾತ್ರಿ ಬರುತ್ತಾರೆ ಎನ್ನುವ ಮಾಹಿತಿ ಇದೆ. ಈ ನಿಟ್ಟಿನಲ್ಲಿ ಎಸ್ಐಟಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ವಿಮಾನ ನಿಲ್ದಾಣದಲ್ಲಿಯೇ ಅವರನ್ನು ವಶಕ್ಕೆ ಪಡೆಯಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.
ಜರ್ಮನಿಯ ಮ್ಯೂನಿಕ್ ನಿಂದ ಬೆಂಗಳೂರಿಗೆ ಲುಫ್ತಾನ್ಸಾ ಏರ್ ಲೈನ್ಸ್ ವಿಮಾನದಲ್ಲಿ ಪ್ರಜ್ವಲ್ ರೇವಣ್ಣ ಅವರು ಟಿಕೆಟ್ ಬುಕ್ ಮಾಡಿದ್ದು, ಈ ವಿಮಾನ ಗುರುವಾರ ರಾತ್ರಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೇರೆ ದೇಶಕ್ಕೆ ಹೋಗಿ ಸುಲಭವಾಗಿ ಅವರನ್ನು ಬಂಧಿಸಲು ಸಾಧ್ಯವಿಲ್ಲ. ಆ ರೀತಿ ಮಾಡಲು ಬರುವುದಿಲ್ಲ. ಹೊರ ದೇಶದಲ್ಲಿ ಬಂಧನ ಎಂಬುದು ನೆಲಮಂಗಲಕ್ಕೆ ಹೋಗಿ ಬಂಧನ ಮಾಡಿದಷ್ಟು ಸುಲಭವಲ್ಲ. ಕೇಂದ್ರ ಕೂಡ ಬೇರೆ ದೇಶದಲ್ಲಿ ಬಂಧಿಸುವ ಅಧಿಕಾರ ಹೊಂದಿಲ್ಲ. ಇದೇ ಕಾರಣಕ್ಕೆ ಇಂಟರ್ಪೋಲ್ ಇದೆ. ಅವರು ಬರುವುದಾಗಿ ಈಗಾಗಲೇ ವಿಡಿಯೋದಲ್ಲಿ ತಿಳಿಸಿದ್ದಾರೆ. ಅವರು ಬಂದರೆ ಎಲ್ಲಾ ಕಾನೂನು ಪ್ರಕ್ರಿಯೆ ಆರಂಭ ಆಗಲಿದೆ ಎಂದರು.
ಈಗಾಗಲೇ ಪ್ರಜ್ವಲ್ ಬಂಧನಕ್ಕೆ ವಾರೆಂಟ್ ಜಾರಿಯಾಗಿದೆ. ಈ ಹಿನ್ನೆಲೆ ಅವರು ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಬಂಧನವಾಗಬೇಕು. ಅವರ ಪಾಸ್ ಪೋರ್ಟ್ ರದ್ದತಿಗೆ ಕೇಂದ್ರಕ್ಕೆ ಪತ್ರ ಬರೆಯಲಾಗಿದ್ದು, ಕೇಂದ್ರ ಕಾನೂನು ಪ್ರಕ್ರಿಯೆ ಅನುಸಾರ ಕಾರ್ಯ ನಿರ್ವಹಿಸಲಿದೆ. ಈ ಬಗ್ಗೆ ಕೇಂದ್ರ ಕೂಡ ಈಗಾಗಲೇ ತಿಳಿಸಿದೆ ಎಂದು ಗೃಹ ಸಚಿವರು ಮಾಹಿತಿ ನೀಡಿದರು.