ಪ್ರತಾಪ್ ಸಿಂಹ ಲೆಕ್ಕ ಕೇಳಿದ್ದಕ್ಕೆ ಕೋವಿಡ್ ಗೆ ಖರ್ಚಾದ ಹಣವನ್ನು ಬಿಡುಗಡೆ ಮಾಡಿದ ಡಿಸಿ ರೋಹಿಣಿ ಸಿಂಧೂರಿ.

94
firstsuddi

ಮೈಸೂರು : ಸಂಸದ ಪ್ರತಾಪ್ ಸಿಂಹ ಕೋವಿಡ್ ಲೆಕ್ಕ ಕೇಳಿದ್ದ ಬೆನ್ನಲ್ಲೇ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರು ಸರ್ಕಾರದಿಂದ ಕೋವಿಡ್ ನಿರ್ವಹಣೆಗೆ ಬಿಡುಗಡೆಯಾದ 41 ಕೋಟಿಯಲ್ಲಿ ಖರ್ಚಾದ ಹಣವನ್ನು ಬಿಡುಗಡೆ ಮಾಡಿದ್ದಾರೆ.

ಪತ್ರಿಕಾ ಪ್ರಕಟಣೆಯಲ್ಲಿ ಬಿಡುಗಡೆಗೊಳಿಸಿರುವ ಡಿಸಿ ರೋಹಿಣಿ ಸಿಂಧೂರಿಯವರು, ನಾನು ಮೈಸೂರು ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ದಿನದಿಂದ ನಿರಂತರವಾಗಿ ವೈಯಕ್ತಿಕವಾಗಿ ಆರೋಪಗಳು ಕೇಳಿಬರುತ್ತಿವೆ. ಆದರೆ ನಾನು ಎಲ್ಲವನ್ನೂ ನಿರ್ಲಕ್ಷಿಸಿ ಸಾಂಕ್ರಾಮಿಕ ಸಂಕಷ್ಟದ ಪರಿಸ್ಥಿತಿಯಲ್ಲಿ ಕೋವಿಡ್ ನಿಯಂತ್ರಣದತ್ತ ಗಮನ ಹರಿಸುತ್ತಿದ್ದೇನೆ. ಜಿಲ್ಲಾಧಿಕಾರಿಯಾಗಿ ನನ್ನ ಗಮನ ಕೊರೊನಾ ಸೋಂಕಿನ ನಿರ್ವಹಣೆ ಹಾಗೂ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮಾತ್ರ ಇರುತ್ತದೆ. ಯಾವುದೇ ವೈಯಕ್ತಿಕ ಆರೋಪಗಳತ್ತ ಗಮನ ನೀಡುವುದಿಲ್ಲ ಎಂದರು.

ವೈಯಕ್ತಿಕ ಆರೋಪಗಳಿಂದ ಜಿಲ್ಲಾಡಳಿತದ ಕೆಲಸಕ್ಕೆ ಧಕ್ಕೆ ತರಲು ಸಾಧ್ಯವಾಗದ ಕಾರಣ ಈಗ ಕೊರೊನಾ ನಿರ್ವಹಣೆ ಕುರಿತು ಸುಳ್ಳು ಮತ್ತು ಬೇಜವಾಬ್ದಾರಿ ಹೇಳಿಕೆಗಳು ಹೊರ ಬರುತ್ತಿವೆ. ಹೀಗಾಗಿ ಈ ಅಂಕಿ ಅಂಶ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ರೋಹಿಣಿ ಸಿಂಧೂರಿ ಅವರು ಬಿಡುಗಡೆಗೊಳಿಸಿರುವ ಅಂಕಿ-ಅಂಶ
• ಜಿಲ್ಲಾಸ್ಪತ್ರೆ ವೈದ್ಯಕೀಯ ಉಪಕರಣಗಳು, ಔಷಧ, ಪಿಪಿಇ ಕಿಟ್, ಮಾಸ್ಕ್ ಹಾಗೂ ಸ್ಟೇಷನರಿ ಇತ್ಯಾದಿ: 13 ಕೋಟಿ ರೂ.
• ಕ್ವಾರಂಟೈನ್ ಒಳಪಟ್ಟವರಿಗೆ ಹೋಟೆಲ್ ವಾಸ್ತವ್ಯ, ಅಂದಿನಿಂದ ಇಂದಿನವರೆಗೆ ರೋಗಿಗಳಿಗೆ ಊಟದ ವ್ಯವಸ್ಥೆ: 4 ಕೋಟಿ ರೂ.
• ವ್ಯಾಕ್ಸಿನೇಷನ್ ಮತ್ತು ಟೆಸ್ಟಿಂಗ್ ವಾಹನ ವ್ಯವಸ್ಥೆ: 4 ಕೋಟಿ ರೂ.
• ಸ್ವಾಬ್ ಕಲೆಕ್ಷನ್ ಮತ್ತು ಹೊರಗುತ್ತಿಗೆ ಸಿಬ್ಬಂದಿ: 1 ಕೋಟಿ ರೂ.
• ಆಮ್ಲಜನಕ ಪೂರೈಕೆ: 1 ಕೋಟಿ ರೂ.
• ಐಸೋಲೇಷನ್ ವ್ಯವಸ್ಥೆ ಮತ್ತು ಕೋವಿಡ್ ಕೇರ್ ಸ್ಥಾಪನೆ ಮತ್ತು ನಿರ್ವಹಣೆ ಇತ್ಯಾದಿ: 5 ಕೋಟಿ ರೂ.
• ಮೈಸೂರು ಮೆಡಿಕಲ್ ಕಾಲೇಜಿಗೆ ಟೆಸ್ಟಿಂಗ್ ಮೆಟಿರಿಯಲ್ಸ್: 7 ಕೋಟಿ ರೂ.
• ಇತರೆ ವೆಚ್ಚಗಳು(ದೂರವಾಣಿ, ಇಂಟರ್ನೆಟ್, ಕಂಪ್ಯೂಟರ್, ಶಾಮಿಯಾನ ಇತ್ಯಾದಿ) 1 ಕೋಟಿ ರೂ.ಸರ್ಕಾರ ನೀಡಿರುವ 41 ಕೋಟಿ ಅನುದಾನದಲ್ಲಿ ಈವರೆಗೆ 36 ಕೋಟಿ ಹಣ ಖರ್ಚಾಗಿದ್ದು, ಅದರ ಸಂಪೂರ್ಣ ಅಂಕಿ-ಅಂಶಗಳನ್ನು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಬಿಡುಗಡೆ ಮಾಡಿದ್ದಾರೆ.