ಪ್ರತ್ಯೇಕ ಘಟನೆ: ನಿರಂತರ ಮಳೆಯಿಂದಾಗಿ ಮನೆಗಳ ಗೋಡೆ ಕುಸಿದು 2 ಕಂದಮ್ಮಗಳ ದಾರುಣ ಸಾವು…

46
firstsuddi

ಹಾವೇರಿ/ದಾವಣಗೆರೆ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಎರಡು ಪ್ರತ್ಯೇಕ ಕಡೆಗಳಲ್ಲಿ ಮನೆಗಳ ಗೋಡೆ ಕುಸಿದು ಎಳೆ ಕಂದಮ್ಮಗಳು ಸಾವಿಗೀಡಾಗಿರುವ ಘಟನೆ ಹಾವೇರಿ ಮತ್ತು ದಾವಣಗೆರೆಯಲ್ಲಿ ನಡೆದಿದೆ.

ನಿರಂತರವಾಗಿ ಬೀಳುತ್ತಿರುವ ಮಳೆಯಿಂದ ಮನೆಯ ಗೋಡೆ ಕುಸಿದು 3 ವರ್ಷದ ಬಾಲಕಿ ಮೃತಪಟ್ಟ ಘಟನೆ ಹಾವೇರಿ ಜಿಲ್ಲೆಯ ಮಾಳಾಪುರ ಗ್ರಾಮದಲ್ಲಿ ನಡೆದಿದೆ.

ಮೃತ ಬಾಲಕಿಯನ್ನು ಭಾಗ್ಯ ಚಲಮರದ್ ಎಂದು ಗುರುತಿಸಲಾಗಿದೆ. 2 ದಿನಗಳ ಹಿಂದೆ ನಿರಂತರ ಮಳೆಯಿಂದ ಮನೆಯ ಗೋಡೆ ಕುಸಿದು ಬಿದ್ದಿತ್ತು. ಘಟನೆಯಲ್ಲಿ 3 ವರ್ಷದ ಬಾಲಕಿ ಭಾಗ್ಯ ಗಂಭೀರವಾಗಿ ಗಾಯಗೊಂಡಿದ್ದಳು. ತಕ್ಷಣವೆ ಆಕೆಗೆ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಬಾಲಕಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಬಾಲಕಿ ಮೃತಪಟ್ಟಿದ್ದಾಳೆ. ಮನೆಯಲ್ಲಿದ್ದ ಮತ್ತೊಂದು ಮಗುವಿಗೂ ಗಾಯವಾಗಿದ್ದು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಬಾಲಕಿಯ ಸಾವಿನಿಂದ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

ಇನ್ನು ದಾವಣಗೆರೆಯಲ್ಲೂ ಮನೆಯೊಂದರ ಗೋಡೆ ಕುಸಿದ ಪರಿಣಾಮ 1 ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ಹರಿಹರ ತಾಲೂಕಿನ ಕುಂಬಳೂರಿನಲ್ಲಿ ನಡೆದಿದೆ. ಕುಂಬಳೂರಿನ ಲಕ್ಷ್ಮಿ ಹಾಗೂ ಕೆಂಚಪ್ಪ ದಂಪತಿಯ ಪುತ್ರಿ ಸ್ಪೂರ್ತಿ ಮನೆಯ ಗೋಡೆ ಕುಸಿದು ಅದರಡಿ ಸಿಲುಕಿ ಸಾವಿಗೀಡಾದ ಕಂದಮ್ಮ. ಕಳೆದ 4-5 ದಿನಗಳಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಮನೆಯ ಗೋಡೆ ಕುಸಿದಿದೆ. ತಂದೆ-ತಾಯಿ ಜೊತೆ ಮಲಗಿದ್ದ ಬಾಲಕಿ ಮೇಲೆ ಗೋಡೆ ಬಿದ್ದ ಪರಿಣಾಮ ಬಾಲಕಿ ಸಾವನ್ನಪ್ಪಿದ್ದಾಳೆ.

ಘಟನೆಯಲ್ಲಿ ಬಾಲಕಿಯ ತಂದೆ-ತಾಯಿಗೂ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗೆ ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಪುಟ್ಟ ಕಂದಮ್ಮನ ಅಗಲಿಕೆಯಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಮಲೆಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.