ಪ್ರಧಾನಿ ಮೋದಿ ಭದ್ರತಾ ವೈಫಲ್ಯ – ಕರ್ತವ್ಯ ನಿರ್ವಹಿಸುವಲ್ಲಿ ಪೊಲೀಸ್ ವರಿಷ್ಠಾಧಿಕಾರಿ ವಿಫಲ…

45
firstsuddi

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಪಂಜಾಬ್ ಗೆ ಭೇಟಿ ನೀಡಿದ್ದ ವೇಳೆ ಉಂಟಾದ ಭದ್ರತಾ ಲೋಪಕ್ಕೆ ಫಿರೋಜ್ ಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಕಾರಣ ಎಂದು ಸುಪ್ರೀಂ ಕೋರ್ಟ್ ಗೆ ಸಮಿತಿ ವರದಿ ಸಲ್ಲಿಸಿದೆ.

ಸುಪ್ರೀಂಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಮಲ್ಹೋತ್ರಾ ನೇತೃತ್ವದ ಐವರು ಸದಸ್ಯರ ಸಮಿತಿಯು ತನ್ನ ವರದಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ನೇತೃತ್ವದ ತ್ರಿ ಸದಸ್ಯ ಪೀಠಕ್ಕೆ ಸಲ್ಲಿಸಿದೆ. ವರದಿಯಲ್ಲಿ ಘಟನೆಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಫಿರೋಜ್‌ಪುರ್‌ ಪೊಲೀಸ್ ವರಿಷ್ಠಾಧಿಕಾರಿ ವಿಫಲರಾಗಿದ್ದರೆ ಎಂದು ಹೇಳಿದೆ.

ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆ ಮಾಡುವ ತಮ್ಮ ಕರ್ತವ್ಯ ಪಾಲನೆ ಮಾಡುವಲ್ಲಿ ಎಸ್‌ಎಸ್‌ಪಿ ವಿಫಲರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಆ ಮಾರ್ಗದಲ್ಲಿ ಬರುತ್ತಾರೆ ಎಂದು ಎರಡು ಗಂಟೆಗಳ ಮುನ್ನ ಅವರಿಗೆ ಮಾಹಿತಿ ನೀಡಿದ್ದರೂ ಮತ್ತು ಅವರ ಬಳಿ ಸಾಕಷ್ಟು ಸಂಖ್ಯೆಯ ಪಡೆ ಇದ್ದರೂ ಅವರು ಅದನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ ಎಂದು ವರದಿಯನ್ನು ಉಲ್ಲೇಖಿಸಿ ಸುಪ್ರೀಂಕೋರ್ಟ್ ಹೇಳಿದೆ.

ಜನವರಿ 5ರಂದು ಪಂಜಾಬ್ ನಲ್ಲಿ ರ‍್ಯಾಲಿಯೊಂದರಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಅವರು ಆಗಮಿಸಿದ್ದರು. ಹವಾಮಾನ ವೈಪರೀತ್ಯದಿಂದಾಗಿ ಹೆಲಿಕಾಪ್ಟರ್ ನಲ್ಲಿ ರ‍್ಯಾಲಿ ಸ್ಥಳಕ್ಕೆ ಆಗಮಿಸಲು ಸಾಧ್ಯವಾಗಿರಲಿಲ್ಲ. ಆಗ ರಸ್ತೆ ಮಾರ್ಗವಾಗಿ ಆಗಮಿಸುತ್ತಿದ್ದಾಗ ಫಿರೋಜ್ ಪುರ್ ಫ್ಲೈಓವರ್ ಬಳಿ ಪ್ರತಿಭಟನೆ ಕಾರಣದಿಂದಾಗಿ ಪ್ರಧಾನಿಯವರು ಸಿಲುಕಿಕೊಂಡಿದ್ದರು. ಬಳಿಕ ಸುಪ್ರೀಂಕೋರ್ಟ್, ಘಟನೆಯಲ್ಲಿ ಅಪರಾಧ ಸಂಚು ಏನಾದರೂ ಇದೆಯೇ ಹಾಗೂ ಪಂಜಾಬ್ ಪೊಲೀಸರ ಪಾತ್ರವೇನು ಎಂದು ತಿಳಿಯಲು ಸಮಿತಿಯೊಂದನ್ನು ರಚಿಸಿತ್ತು.