ಪ್ರೀತಿಸಿದ ಯುವತಿ ಜೊತೆ ಓಡಿಹೋದ ಮಗ- ಯುವಕನ ತಾಯಿಯನ್ನು ಬೆತ್ತಲೆಗೊಳಿಸಿ ಹಲ್ಲೆ ನಡೆಸಿದ 7 ಮಂದಿ ಆರೋಪಿಗಳ ಬಂಧನ…

50
firstsuddi

ಬೆಳಗಾವಿ: ತಾಲ್ಲೂಕಿನ ವಂಟಮೂರಿ ಗ್ರಾಮದಲ್ಲಿ ಮಹಿಳೆಯೊಬ್ಬರನ್ನು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಮತ್ತು ಹಲ್ಲೆ ನಡೆಸಿ ನಾಪತ್ತೆಯಾಗಿರುವ ಇನ್ನಿಬ್ಬರಿಗಾಗಿ ಶೋಧ ಜಾರಿಯಲ್ಲಿದೆ ಎಂದು ಬೆಳಗಾವಿ ಪೊಲೀಸ್ ಕಮೀಶನರ್ ಎಸ್ ಎನ್ ಸಿದ್ದರಾಮಪ್ಪ ಹೇಳಿದರು.

ವಂಟಮೂರಿ ಗ್ರಾಮಕ್ಕೆ ಭೇಟಿ ನೀಡಿ ಘಟನೆಯ ವಿವರಗಳನ್ನು ಪರಿಶೀಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸಿದ್ದರಾಮಪ್ಪ, ಹಲ್ಲೆಗೊಳಗಾದ ಮಹಿಳೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗುತ್ತಿದೆ, ಅವರ ಜೀವಕ್ಕೇನೂ ಅಪಾಯವಿಲ್ಲ ಎಂದು ಹೇಳಿದರು. ಹಲ್ಲೆಗೊಳಗಾದ ಕುಟುಂಬ ಸದಸ್ಯರು ನೀಡಿರುವ ದೂರಿನ ಮೇರೆಗೆ, ಅನ್ವಯವಾಗುವ ಸೆಕ್ಷನ್ ಗಳ ಅಡಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಹೇಳಿದರು. ಗ್ರಾಮದಲ್ಲಿ ಮತ್ತೇ ಯಾವುದೇ ಅಹಿತಕರ ಘಟನೆ ಜರುಗದಂತೆ ಮುಂಜಾಗ್ರತಾ ಕ್ರಮವಾಗಿ ಒಂದು ಕೆಎಸ್ ಆರ್ ಪಿ ತುಕುಡಿ, ಒಬ್ಬ ಎಸಿಪಿ ಮತ್ತು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅವರು ಹೇಳಿದರು

ಘಟನೆಯ ಹಿನ್ನಲೆ:-
ಸಂತ್ರಸ್ತೆಯ ಪುತ್ರ ದುಂಡಪ್ಪ ಹಾಗೂ ಇದೇ ಊರಿನ ಪ್ರಿಯಾಂಕ ಪ್ರೀತಿಸುತ್ತಿದ್ದರು. ಪ್ರಿಯಾಂಕ ಮನೆಯವರು ಇದಕ್ಕೆ ಒಪ್ಪದೇ, ಬೇರೊಬ್ಬ ವರನೊಂದಿಗೆ ನಿಶ್ಚಿತಾರ್ಥ ಮಾಡಿದ್ದರು. ಇಂದು ಪ್ರಿಯಾಂಕ ಮದುವೆ ಕೂಡ ಗೊತ್ತಾಗಿತ್ತು. ಆದರೆ, ನಿನ್ನೆ ರಾತ್ರಿಯೇ ದುಂಡಪ್ಪ– ಪ್ರಿಯಾಂಕ ಮನೆ ಬಿಟ್ಟು ಓಡಿಹೋದರು.

ಇದರಿಂದ ರೊಚ್ಚಿಗೆದ್ದ ಯುವತಿ ಮನೆಯವರು ಯುವಕನ ತಾಯಿಯನ್ನು ಹಿಗ್ಗಾಮುಗ್ಗಾ ಥಳಿಸಿದರು. ಬೆತ್ತಲೆ ಮಾಡಿ ಊರಿನ ಬೀದಿಗಳಲ್ಲಿ ಓಡಾಡಿಸಿದರು. ಕಂಬಕ್ಕೆ ಕಟ್ಟಿ ಮತ್ತೆ ಹೊಡೆದರು. ಅವರ ಮನೆಗೆ ಬೆಂಕಿ ಹಚ್ಚಿ ಅಪಾರ ಹಾನಿ ಮಾಡಿದರು ಎಂದು ಮೂಲಗಳು ತಿಳಿಸಿವೆ. ತಡರಾತ್ರಿ ಸ್ಥಳಕ್ಕೆ ಕಾಕತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ಸಂಬಂಧ 7 ಜನ ಆರೋಪಿಗಳನ್ನು ಬಂಧಿಸಿದ್ದಾರೆ.