ಪ್ರೀತಿಸುವಂತೆ ನಿರಂತರ ಕಿರುಕುಳ- ಮನನೊಂದು ಯುವತಿ ಆತ್ಮಹತ್ಯೆ…

55
firstsuddi

ಹಾಸನ: ಯುವಕನೊಬ್ಬ ಪ್ರೀತಿಸುವಂತೆ ಪೀಡಿಸಿ ನಿರಂತರ ಕಿರುಕುಳ ನೀಡಿದ ಹಿನ್ನಲೆಯಲ್ಲಿ ಮನನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಜಿಲ್ಲೆಯ ಬೇಲೂರು ತಾಲ್ಲೂಕಿನ ನಿಡಗೋಡು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಜಯಣ್ಣ ಎಂಬವರ ಪುತ್ರಿ ಸಂಗೀತಾ (21) ಆತ್ಮಹತ್ಯೆಗೆ ಶರಣಾದ ದುರ್ದೈವಿ. ಅದೇ ಗ್ರಾಮದ ಹೊನ್ನಯ್ಯ ಎಂಬವರ ಪುತ್ರ ಶಿವು ಎಂಬಾತ ಸಂಗೀತಾಳನ್ನು ಪ್ರೀತಿಸುತ್ತಿರುವುದಾಗಿ ಹೇಳಿಕೊಂಡು ಓಡಾಡುತ್ತಿದ್ದ. ಅಲ್ಲದೇ ತನಗೆ ಯುವತಿಯನ್ನು ಮದುವೆ ಮಾಡಿಕೊಡುವಂತೆ ಸಂಗೀತಾ ಪೋಷಕರಲ್ಲಿ ಕೇಳಿದ್ದ. ಇದಕ್ಕೆ ಸಂಗೀತಾ ಮನೆಯವರು ಈಗಲೇ ಮದುವೆ ಮಾಡುವುದಿಲ್ಲ ಎಂದು ತಿಳಿಸಿದ್ದರು. ಇಷ್ಟಾದರೂ ಶಿವು, ಸಂಗೀತಾಳಿಗೆ ಪ್ರೀತಿಸುವಂತೆ ಪೀಡಿಸುತ್ತಿದ್ದ ಎಂದು ತಿಳಿದುಬಂದಿದೆ.

ಸಂಗೀತಾ ಕುಟುಂಬ ಜ.11 ರಂದು ಬೇಲೂರಿನ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ತೆರಳಿದ್ದರು. ದೇವಸ್ಥಾನದ ಬಳಿಗೂ ಶಿವು ಬಂದಿದ್ದ, ಸಂಗೀತಾಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ನನ್ನ ಫೋನ್ ಏಕೆ ರಿಸೀವ್ ಮಾಡಲ್ಲ ಎಂದು ತಲೆಗೆ ಹೊಡೆದಿದ್ದನು. ನನ್ನನ್ನು ಪ್ರೀತಿಸದಿದ್ದರೆ ಕೊಲೆ ಮಾಡುವುದಾಗಿ ಶಿವು ಬೆದರಿಕೆ ಹಾಕಿ ತೆರಳಿದ್ದನು. ಇದರಿಂದ ಮನನೊಂದ ಸಂಗೀತ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತಳ ಪೋಷಕರು ಆರೋಪಿಸಿದ್ದಾರೆ.

ಇದೇ ನೋವಿನಿಂದ ಗ್ರಾಮಕ್ಕೆ ಬಂದ ಸಂಗೀತಾ, ಮನೆಯಲ್ಲಿ ಯಾರೂ ಇಲ್ಲದ ವೇಳೆ ರೂಂನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮಗಳು ಸಾಯುವಂತೆ ಪ್ರಚೋದನೆ ನೀಡಿ, ಸಾರ್ವಜನಿಕರ ಎದುರು ಅವಮಾನ ಮಾಡಿದ ಶಿವು ವಿರುದ್ಧ ಕಾನೂನು ಕ್ರಮಕ್ಕೆ ಮೃತಳ ಪೋಷಕರು ಆಗ್ರಹಿಸಿದ್ದಾರೆ.

ಆರೋಪಿ ಶಿವುನನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.