ಮುಂಬೈ : ಕರ್ನಾಟಕದ ಸಿನಿ ಶೆಟ್ಟಿ(21) ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2022 ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಭಾನುವಾರ(ನಿನ್ನೆ) ಮುಂಬೈನ ಜಿಯೋ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ ಫೆಮಿನಾ ಮಿಸ್ ಇಂಡಿಯಾದ ಗ್ರ್ಯಾಂಡ್ ಫಿನಾಲೆಯಲ್ಲಿ ಸಿನಿ ಶೆಟ್ಟಿ ಅವರು ಫೆಮಿನಾ ಮಿಸ್ ಇಂಡಿಯಾ 2022 ಪ್ರಶಸ್ತಿಯನ್ನು ಗೆದ್ದಿದ್ದಾರೆ. ರಾಜಸ್ಥಾನದ ರೂಬಲ್ ಶೆಖಾವತ್ ಮಿಸ್ ಇಂಡಿಯಾ 2022ರ ಮೊದಲ ರನ್ನರ್ ಅಪ್ ಆದರೆ, ಉತ್ತರ ಪ್ರದೇಶದ ಶಿನಾತಾ ಚೌಹಾನ್ ಅವರು ಮಿಸ್ ಇಂಡಿಯಾ 2022 ಎರಡನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ.
ಬಾಲಿವುಡ್ ಕಲಾವಿದರಾದ ಮಲೈಕಾ ಅರೋರಾ, ನೇಹಾ ಧೂಪಿಯಾ, ಡಿನೋ ಮೋರಿಯಾ, ರಾಹುಲ್ ಖನ್ನಾ, ರೋಹಿತ್ ಗಾಂಧಿ ಕಾರ್ಯಕ್ರಮದ ತೀರ್ಪುಗಾರರಾಗಿ ಭಾಗವಹಿಸಿದ್ದರು. ಕೃತಿ ಸನೋನ್ ಸೇರಿದಂತೆ ಅನೇಕ ನಟಿಯರು ವೇದಿಕೆಯಲ್ಲಿ ನೃತ್ಯ ಪ್ರದರ್ಶನ ನೀಡಿದರು.
ಕರ್ನಾಟಕದ ಕರಾವಳಿ ಜಿಲ್ಲೆ ದಕ್ಷಿಣಕನ್ನಡ ಮೂಲದ ಸಿನಿ ಶೆಟ್ಟಿ ಪ್ರಸ್ತುತ ಚಾರ್ಟರ್ಡ್ ಫೈನಾನ್ಷಿಯಲ್ ಅನಾಲಿಸ್ಟ್ (ಸಿಎಫ್ ಎ) ಕೋರ್ಸ್ ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಸಿನಿಶೆಟ್ಟಿ ಕರ್ನಾಟಕದ ನಿವಾಸಿಯಾಗಿದ್ದರೂ ಹುಟ್ಟಿ ಬೆಳೆದಿದ್ದು ಮುಂಬೈನಲ್ಲಿ. ಇವರು 4ನೇ ವಯಸ್ಸಿನಲ್ಲೇ ನೃತ್ಯಾಭ್ಯಾಸ ಶುರು ಮಾಡಿದ್ದರು. ಇವರು ಭರತನಾಟ್ಯ ಕಲಾವಿದೆಯೂ ಹೌದು.










