ಬೆಂಗಳೂರು : ರಾಜ್ಯದಲ್ಲಿ ಶೀಘ್ರವೇ ಡಾ. ಸರೋಜಿನಿ ಮಹಿಷಿ ವರದಿ ಜಾರಿಗೆ ತರುವಂತೆ ಆಗ್ರಹಿಸಿ ಕರ್ನಾಟಕ ಸಂಘಟನೆಗಳ ಒಕ್ಕೂಟ ಹಾಗೂ ಅಖಂಡ ಕರ್ನಾಟಕ ಫೆ.13ರಂದು ಕರ್ನಾಟಕ ಬಂದ್‍ಗೆ ಕರೆ ನೀಡಿದೆ. ಕರ್ನಾಟಕ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಾಗೇಶ್ ಅವರ ನೇತೃತ್ವದಲ್ಲಿ ಕರ್ನಾಟಕ ಬಂದ್‍ಗೆ ಕರೆ ನೀಡಲಾಗಿದ್ದು, ಬಂದ್‍ಗೆ 400ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಸೂಚಿಸಿದೆ. ಸುಮಾರು 50 ಸಾವಿರಕ್ಕೂ ಹೆಚ್ಚು ಮಂದಿ ಬಂದ್‍ನಲ್ಲಿ ಪಾಲ್ಗೊಳ್ಳಲಿದ್ದು, ಟೌನ್ ಹಾಲ್‍ನಿಂದ ಫ್ರೀಡಂ ಪಾರ್ಕ್ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು. ಅಲ್ಲದೇ ಓಲಾ, ಊಬರ್, ಲಾರಿ, ಟ್ಯಾಕ್ಸಿ ಮಾಲೀಕರ ಸಂಘ, ಕೊಡಿಹಳ್ಳಿ ಚಂದ್ರಶೇಖರ್ ಅವರ ನೇತೃತ್ವದ ರೈತ ಸಂಘ ಸೇರಿದಂತೆ ವಿವಿಧ ಕಾರ್ಮಿಕರ ಹಾಗೂ ಕನ್ನಡಪರ ಸಂಘಟನೆಗಳಿಂದ ಬೆಂಬಲ ಸಿಕ್ಕಿದೆ. ಕಳೆದ 96 ದಿನಗಳಿಂದ ಮೌರ್ಯ ವೃತ್ತದ ಬಳಿ ಪ್ರತಿಭಟನೆ ನಡೆಸಲಾಗುತ್ತಿದೆ. ಆದರೆ ಸರ್ಕಾರ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡದ ಹಿನ್ನೆಲೆ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ ಎಂದು ಕರ್ನಾಟಕ ಸಂಘಟನೆಗಳ ಒಕ್ಕೂಟ ಅಧ್ಯಕ್ಷ ನಾಗೇಶ್ ಅವರು ತಿಳಿಸಿದ್ದಾರೆ.










