ಬದುಕಿನ ಸಂಚಾರ ನಿಲ್ಲಿಸಿದ ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್!

96
firstsuddi

ಬೆಂಗಳೂರು : ರಸ್ತೆ ಅಪಘಾತದಿಂದ ಮೆದುಳಿಗೆ ಹಾಗೂ ತೊಡೆಗೆ ಗಂಭೀರವಾಗಿ ಗಾಯವಾಗಿ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟ ಸಂಚಾರಿ ವಿಜಯ್(37) ಅವರು ಇಂದು ನಿಧರಾಗಿದ್ದಾರೆ.

ಇಂದು ಬೆಳಗ್ಗೆ ನಟನ ಆರೋಗ್ಯದ ಬಗ್ಗೆ ಅಪೊಲೋ ಆಸ್ಪತ್ರೆ ವೈದ್ಯ ಡಾ. ಅರುಣ್ ಕುಮಾರ್ ನಾಯ್ಕ್ ಮಾತನಾಡಿ, ಕಳೆದ ಮೂವತ್ತಾರು ಗಂಟೆಗಳಿಂದ ಚಿಕಿತ್ಸೆ ನೀಡುತ್ತಿದ್ದರೂ ಅದಕ್ಕೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಎಲ್ಲಾ ಚಿಕಿತ್ಸೆ ಕೊಡಲಾಗ್ತಿದೆ ಎಂಬುದಾಗಿ ಮಾಹಿತಿ ನೀಡಿದ್ದರು.

2011ರಲ್ಲಿ ತೆರೆ ಕಂಡ ರಂಗಪ್ಪ ಹೋಗ್ಬಿಟ್ನಾ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದ ನಟ ಸಂಚಾರಿ ವಿಜಯ್ ಅವರು, ನಾನು ಅವನಲ್ಲ ಅವಳು ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ನಟ ಒಗ್ಗರಣೆ, ಕೃಷ್ಣ ತುಳಸಿ, ವಿಲನ್, ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಕಿಲ್ಲಿಂಗ್ ವೀರಪ್ಪನ್, ಅಲ್ಲಮ, ಸಿನಿಮಾ ಆಕ್ಟ್ 1978 ಮೊದಲಾದ ಕನ್ನಡ ಚಿತ್ತಗಳಲ್ಲದೆ, ತಮಿಳು ಚಿತ್ರದಲ್ಲಿಯೂ ನಟಿಸಿದ್ದರು.

ಅಪಘಾತವಾಗಿದ್ದು ಹೇಗೆ?:
ಶನಿವಾರ ರಾತ್ರಿ ಗೆಳೆಯನ ಮನೆಯಲ್ಲಿ ಊಟ ಮಾಡಿಕೊಂಡು ಬೈಕಿನಲ್ಲಿ ನಟ ಹಿಂದಿರುಗುತ್ತಿದ್ದರು. ಗೆಳೆಯ ನವೀನ್ ಬೈಕ್ ಓಡಿಸುತ್ತಿದ್ದು, ವಿಜಯ್ ಹಿಂಬದಿಯಲ್ಲಿ ಕುಳಿತಿದ್ದರು. ಜೆಪಿ ನಗರದ 7ನೇ ಹಂತದಲ್ಲಿ ಬೈಕ್ ಸ್ಕಿಡ್ ಆಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿತ್ತು. ಅಪಘಾತದ ರಭಸಕ್ಕೆ ನಟ ಬೈಕಿನಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದರು. ಕೂಡಲೇ ಸ್ಥಳೀಯರು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದರು.

ಮುಖ್ಯಮಂತ್ರಿ ಯಡಿಯೂರಪ್ಪ ,ನಟ ಕಿಚ್ಚ ಸುದೀಪ್ ಸೇರಿದಂತೆ ಅನೇಕರು ಕಂಬನಿ ಮಿಡಿದಿದ್ದಾರೆ.