ಮುಂಬೈ : ಬಾಲಿವುಡ್ ನ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅವರು ನೀಲಿ ಚಿತ್ರ ದಂಧೆಯಲ್ಲಿ ಬಂಧನವಾದ ಬಳಿಕ ಮೌನವಾಗಿದ್ದ ಶಿಲ್ಪಾ ಶೆಟ್ಟಿ ಇದೀಗ ಮೌನ ಮುರಿದಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಭಾವನಾತ್ಮಕವಾಗಿ ಬರೆದುಕೊಂಡಿರುವ ಶೀಲ್ಪಾ ಶೆಟ್ಟಿ ಅವರು, ಬದುಕಿರುವುದಕ್ಕಾಗಿ ನಾನು ಅದೃಷ್ಟವಂತೆ ಎಂದು ತಿಳಿದುಕೊಂಡು ದೀರ್ಘ ಉಸಿರು ತೆಗೆದುಕೊಳ್ಳುತ್ತೇನೆ. ಈ ಹಿಂದೆ ಅನೇಕ ಸವಾಲುಗಳನ್ನು ಎದುರಿಸಿದ್ದೇನೆ. ಮುಂದೆಯೂ ಅನೇಕ ಸವಾಲುಗಳನ್ನು ಎದುರಿಸಲಿದ್ದೇನೆ. ಇಂದಿನ ನನ್ನ ಬದುಕನ್ನು ಯಾವುದೂ ಕೂಡ ಕೆಡಿಸಬೇಕಿಲ್ಲ. ಈ ಹಿಂದೆ ನಮ್ಮನ್ನು ನೋಯಿಸಿದವರ ಬಗ್ಗೆ, ಅನುಭವಿಸಿದ ಹತಾಶೆಯ ಬಗ್ಗೆ, ಕೈಕೊಟ್ಟ ಅದೃಷ್ಟದ ಬಗ್ಗೆ ನಾವು ಕೋಪ ಮಾಡಿಕೊಳ್ಳುತ್ತೇವೆ. ಮುಂದೆ ಬರಬಹುದಾದ ಸಾವು-ನೋವು, ಕಷ್ಟ-ನಷ್ಟಗಳ ಬಗ್ಗೆ ಭಯ ಇಟ್ಟುಕೊಳ್ಳುತ್ತೇವೆ. ಹಿಂದೆ ಏನಾಗಿತ್ತು, ಮುಂದೆ ಏನಾಗಬಹುದು ಎಂಬುದರ ಚಿಂತೆ ಬಿಟ್ಟು, ಈ ಕ್ಷಣಕ್ಕಾಗಿ ನಾವು ಬದುಕಬೇಕು ಎಂದು ಶಿಲ್ಪಾ ಶೆಟ್ಟಿ ಅವರು ಮಾರ್ಮಿಕವಾಗಿ ಪೋಸ್ಟ್ ಮಾಡಿದ್ದಾರೆ.
ಅಶ್ಲೀಲ ಚಿತ್ರಗಳನ್ನು ನಿರ್ಮಿಸಿದ ಆರೋಪದ ಹಿನ್ನೆಲೆಯಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ಉದ್ಯಮಿ ರಾಜ್ ಕುಂದ್ರಾ ಅವರನ್ನು ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರು ಬಂಧಿಸಿದ್ದಾರೆ. ಕುಂದ್ರಾ ಅವರನ್ನು ಜುಲೈ 19ರಂದು ಬಂಧಿಸಿದ್ದು, ಅವರ ಮೇಲೆ ಇರುವ ಆರೋಪಗಳನ್ನು ಪುಷ್ಟೀಕರಿಸುವಂತಹ ಅನೇಕ ಸಾಕ್ಷಿಗಳು ಕೂಡ ಪೊಲೀಸರಿಗೆ ಸಿಕ್ಕಿವೆ.










