ಬಳ್ಳಾರಿ ಜಿಲ್ಲಾಧಿಕಾರಿಗಳಾಗಿ ಪವನಕುಮಾರ್ ಮಲಪಾಟಿ ಅಧಿಕಾರ ಸ್ವೀಕಾರ…

165
firstsuddi

ಬಳ್ಳಾರಿ: ಬಳ್ಳಾರಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಗಳಾಗಿ ಪವನಕುಮಾರ್ ಮಾಲಪಾಟಿ ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು.
ಕೇಂದ್ರ ಹಣಕಾಸು ಸಚಿವರ ಆಪ್ತ ಕಾರ್ಯದರ್ಶಿಗಳಾಗಿ ನಿಯೋಜಿತರಾಗಿರುವ ನಿರ್ಗಮಿತ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ನೂತನ ಜಿಲ್ಲಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿದರು.
ಪವನಕುಮಾರ್ ಮಾಲಪಾಟಿ ಅವರು 2012ನೇ ಬ್ಯಾಚ್‍ನ ಐಎಎಸ್ ಅಧಿಕಾರಿಗಳಾಗಿದ್ದು, ವಾಣಿಜ್ಯ ತೆರಿಗೆಗಳ(ಜಾರಿ) ಹೆಚ್ಚುವರಿ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ಮಾಲಪಾಟಿ ಅವರು ಈ ಹಿಂದೆ ಶಿರಸಿ, ಹೊಸಪೇಟೆ ಸಹಾಯಕ ಆಯುಕ್ತರಾಗಿಯೂ ಹಾಗೂ ಬೀದರ್ ಜಿಪಂ ಸಿಇಒ ಆಗಿಯೂ ಕೆಲಸ ನಿರ್ವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ನಿರ್ಗಮಿತ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್‌ರು ಬಳ್ಳಾರಿಯಲ್ಲಿ ಕಳೆದ 1 ವರ್ಷ 7ತಿಂಗಳುಗಳ ಕಾಲ ಕೆಲಸ ನಿರ್ವಹಿಸಿದ್ದೇನೆ. ಇಲ್ಲಿನ ಜನರು ಅತ್ಯಂತ ಸೌಹಾರ್ದಯುತವಾಗಿದ್ದಾರೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಜನರು ಮತ್ತು ಜನಪ್ರತಿನಿಧಿಗಳು ಸಹಕಾರ ನೀಡಿದ್ದಾರೆ ಎಂದು ಸ್ಮರಿಸಿದರು.
ಕೋವಿಡ್ ಸಂದರ್ಭದಲ್ಲಂತೂ ಆರೋಗ್ಯ ಇಲಾಖೆ, ಸ್ವಯಂಸೇವಾ ಸಂಸ್ಥೆಗಳು ಹಾಗೂ ವಿವಿಧ ಇಲಾಖೆಗಳ ಕಾರ್ಯನಿರ್ವಹಣೆ ಅದ್ಭುತವಾಗಿತ್ತು. ಇಲ್ಲಿನ ಮಾಧ್ಯಮ ಕ್ಷೇತ್ರದ ಪ್ರತಿನಿಧಿಗಳಿಂದ ಅತ್ಯುತ್ತಮ ಸಹಕಾರ ಸಿಕ್ಕಿದೆ. ಅತ್ಯಂತ ಸಂತೋಷದಿಂದ ಮತ್ತು ಇಲ್ಲಿನ ಸವಿನೆನಪುಗಳೊಂದಿಗೆ ತೆರಳುತ್ತಿರುವೆ ಎಂದರು.
ಪವನಕುಮಾರ್ ಮಾಲಪಾಟಿ ಅವರು ಅತ್ಯುತ್ತಮ ಅಧಿಕಾರಿಗಳಾಗಿದ್ದು, ನನಗೆ ಸಹಕಾರ ನೀಡಿದಂತೆ ಅವರಿಗೂ ನೀಡಿ ಎಂದರು.
ನೂತನ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಮಾತನಾಡಿ, ಹಿಂದಿನ ಜಿಲ್ಲಾಧಿಕಾರಿಗಳು ಈ ಜಿಲ್ಲೆಯಲ್ಲಿ ಅತ್ಯುತ್ತಮವಾಗಿ ಕೆಲಸ ನಿರ್ವಹಿಸಿದ್ದು, ಅವರಂತೆಯೇ ನಾನು ಕೂಡ ಉತ್ತಮವಾಗಿ ಕೆಲಸ ನಿರ್ವಹಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವೆ ಎಂದರು.
ಈ ಹಿಂದೆ ಹೊಸಪೇಟೆಯಲ್ಲಿ ಸಹಾಯಕ ಆಯುಕ್ತರಾಗಿ ಕೆಲಸ ನಿರ್ವಹಿಸಿದ್ದರಿಂದ ಜಿಲ್ಲೆಯ ಬಗ್ಗೆ ಅರಿವಿದೆ ಎಂದು ಹೇಳಿದ ಡಿಸಿ ಮಾಲಪಾಟಿ ಅವರು ಜಿಲ್ಲೆಯಲ್ಲಿ ನನೆಗುದಿಗೆ ಬಿದ್ದಿರುವ ಯೋಜನೆಗಳನ್ನು ಪೂರ್ಣಗೊಳಿಸಲು ಮತ್ತು ಅತ್ಯುತ್ತಮವಾಗಿ ಕೆಲಸ ನಿರ್ವಹಿಸಲು ಹಾಗೂ ಈ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಅವರು ಹೇಳಿದರು.
ನಂತರ ನೂತನ ಡಿಸಿ ಮಾಲಪಾಟಿ ಅವರು ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ್ದ ಜನರ ಸಮಸ್ಯೆಗಳನ್ನು ಆಲಿಸಿದರು.