ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸಾವು – ಅಪಘಾತ ಸ್ಥಳದಲ್ಲಿ ಮದ್ಯದ ಬಾಟಲಿಗಳು ಪತ್ತೆ…

18
firstsuddi

ಬೆಂಗಳೂರು : ಕೆಎಸ್‌ಆರ್‌ಟಿಸಿ ಬಸ್ ಗೆ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದ ರಾಜ್​ಕುಮಾರ್ ರಸ್ತೆಯಲ್ಲಿ ನಡೆದಿದೆ. 39 ವರ್ಷದ ರಮೇಶ್ ಎಂಬ ಮೃತ ದುರ್ದೈವಿ.

ನಿನ್ನೆ ತಡರಾತ್ರಿ ಕುಕ್ಕೇ ಸುಬ್ರಹ್ಮಣ್ಯದಿಂದ ಬೆಂಗಳೂರಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ರಾಜ್​ಕುಮಾರ್ ರಸ್ತೆ ಮೂಲಕ ಮೆಜೆಸ್ಟಿಕ್ ಗೆ ಹೋಗ್ತಿತ್ತು. ಈ ವೇಳೆ ಬೈಕ್ ನಲ್ಲಿ ಹೋಗ್ತಿದ್ದ ರಮೇಶ್, ಬಸ್ ಓವರ್ ಟೇಕ್ ಮಾಡಲು ಹೋಗಿ ಬಸ್ ಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಕೆಳಗೆ ಬಿದ್ದ ಸವಾರನ ತಲೆಗೆ ಗಂಭೀರ ಗಾಯವಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

ಘಟನೆ ನಂತರ ಮೃತನ ಸ್ನೇಹಿತರು ಕೆಎಸ್‌ಆರ್‌ಟಿಸಿ ಬಸ್ ಚಾಲಕ ಮತ್ತು ನಿರ್ವಾಹಕನಿಗೆ ಮನಬಂದಂತೆ ಥಳಿಸಿದ್ದಾರೆ. ಇನ್ನೂ ಅಪಘಾತವಾಗಿದ್ದ ಬೈಕ್ ಬಳಿ ಮದ್ಯದ ಬಾಟಲಿಗಳು ಕೂಡ ಪತ್ತೆಯಾಗಿದ್ದು, ಬೈಕ್ ಸವಾರ ಕುಡಿದು ಗಾಡಿ ಓಡಿಸಿದ್ದ ಶಂಕೆ ವ್ಯಕ್ತವಾಗಿದೆ. ಘಟನೆ ಸಂಬಂಧ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿದ್ದು, ತನಿಖೆ ಬಳಿಕವಷ್ಟೇ ಘಟನೆಗೆ ಅಸಲಿ ಕಾರಣ ಹೊರಬರಬೇಕಿದೆ.