ಬಹುನಿರೀಕ್ಷಿತ ‘ಆರ್​ಆರ್​ಆರ್’ ಸಿನಿಮಾ ರಿಲೀಸ್ – ಚಿತ್ರಮಂದಿರಗಳೆದುರು ಕುಣಿದು ಕಪ್ಪಳಿಸಿದ ಫ್ಯಾನ್ಸ್…

64
firstsuddi

ಬೆಂಗಳೂರು : ಜ್ಯೂ.ಎನ್​ಟಿಆರ್ ಹಾಗೂ ರಾಮ್ ಚರಣ್ ಅಭಿನಯದ ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ಆರ್​ಆರ್​ಆರ್​ ಸಿನಿಮಾ ಇಂದು ವಿಶ್ವದಾದ್ಯಂತ ತೆರೆಕಂಡಿದ್ದು ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಆರ್​ಆರ್​ಆರ್​’ ಸಿನಿಮಾವನ್ನ ಬಾಹುಬಲಿ ನಿರ್ದೇಶಕ ಎಸ್ ಎಸ್ ರಾಜಮೌಳಿ ನಿರ್ದೇಶನ ಮಾಡಿದ್ದಾರೆ. ಟಾಲಿವುಡ್ ಚಿತ್ರರಂಗದ ಸೂಪರ್ ಸ್ಟಾರ್ ಗಳಾದ ಜೂನಿಯರ್ ಎನ್ ಟಿಆರ್ ಮತ್ತು ರಾಮ್ ಚರಣ್ ತೇಜ್ ನಾಯಕರಾಗಿ ಮಿಂಚಿದ್ದು, ನಟಿ ಆಲಿಯಾ ಭಟ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆರ್​ಆರ್​ಆರ್​ ಸಿನಿಮಾ ರಾಜ್ಯಾದ್ಯಂತ 450 ಥಿಯೇಟರ್ ಗಳಲ್ಲಿ ರಿಲೀಸ್ ಆಗಿದ್ದು, ಸಿನಿಮಾ ನೋಡಲು ಅಭಿಮಾನಿಗಳು ಥಿಯೇಟರ್ ನತ್ತ ಮುಗಿಬೀಳುತ್ತಿದ್ದಾರೆ. ಅಲ್ಲದೇ ರಾಮ್ ಚರಣ್ ಹಾಗೂ ಜೂ.ಎನ್​ಟಿಆರ್ ಕಟೌಟ್ ಗಳಿಗೆ ಹಾರ ಹಾಕಿ, ಕ್ಷೀರಾಭಿಷೇಕ ಮಾಡಿ, ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

ಬೆಂಗಳೂರಿನಲ್ಲಿ ಮಧ್ಯರಾತ್ರಿಯಿಂದಲೇ ಶೋ ಆರಂಭವಾಗಿದೆ. ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಅಂಜನ್ ಚಿತ್ರ ಮಂದಿರದಲ್ಲಿ ತಡರಾತ್ರಿ 12:30ಕ್ಕೆ ಆರ್​ಆರ್​ಆರ್​ ಮೊದಲ ಶೋ ಬಿಡುಗಡೆಯಾಗಿದೆ. ಅಂಜನ್ ಥಿಯೇಟರ್ ಆವರಣದಲ್ಲಿ ರಾಮ್ ಚರಣ್ ಹಾಗೂ ಜೂ.ಎನ್​ಟಿಆರ್ ಅಭಿಮಾನಿಗಳ ಪರಸ್ಪರ ಜೈಕಾರ ಕೂಗಿ ಸಂಭ್ರಮಿಸಿದ್ದಾರೆ. ಅಲ್ಲದೇ ದೊಡ್ಡಬಳ್ಳಾಪುರ ನಗರದ ಸೌಂದರ್ಯ ಮಹಲ್ ನಲ್ಲಿ ಇಂದು ಮುಂಜಾನೆ 3 ಗಂಟೆಗೆ ಚಿತ್ರ ಪ್ರದರ್ಶನಗೊಂಡಿತು. ಅಭಿಮಾನಿಗಳಿಗಾಗಿ ಮುಂಜಾನೆಯೇ ಸಿನಿಮಾ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಥಿಯೇಟರ್ ತುಂಬಾ ಜಮಾಯಿಸಿದ ಅಭಿಮಾನಿಗಳು ಪರದೆ ಮುಂದೆ ಕುಣಿದು ಕುಪ್ಪಳಿಸಿದರು.