ಬಾಂಗ್ಲಾದೇಶಿ ಪ್ರಜೆಗಳ ಅಕ್ರಮ ವಲಸೆ ದಂಧೆ ಬಹಿರಂಗ.

28

ನವದೆಹಲಿ: ಬಾಂಗ್ಲಾದೇಶಿ ಪ್ರಜೆಗಳ ಅಕ್ರಮ ವಲಸೆ ದಂಧೆಯನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ. ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪದಲ್ಲಿ 6 ಜನರೊಂದಿಗೆ ಐದು ಜನ ಬಾಂಗ್ಲಾದೇಶಿ ಪ್ರಜೆಗಳನ್ನೂ ಬಂಧಿಸಲಾಗಿದೆ ಎಂದು ದಕ್ಷಿಣ ಜಿಲ್ಲೆಯ ಡಿಸಿಪಿ ಅಂಕಿತ್ ಚೌಹಾಣ್ ತಿಳಿಸಿದ್ದಾರೆ. ಇತ್ತಿಚೇಗೆ ಸಂಗಮ್ ವಿಹಾರ್‍ನಲ್ಲಿ ಸೆಟಾನ್ ಶೇಖ್ ಎಂಬುವನ ಕೊಲೆಯಾಗಿತ್ತು. ಕೊಲೆಯಾಗಿದ್ದ ವ್ಯಕ್ತಿ ಬಾಂಗ್ಲಾದೇಶಿ ವಲಸಿಗರಿಗೆ ನಕಲಿ ಆಧಾರ್ ಕಾರ್ಡ್‍ಗಳನ್ನ ಸೃಷ್ಟಿಸಲು ಸಹಾಯ ಮಾಡುತ್ತಿದ್ದಾನೆ ಎಂದು ಮಾಹಿತಿ ಪೊಲೀಸರಿಗೆ ತಿಳಿದುಬಂದಿತ್ತು. ತನಿಖೆ ವೇಳೆ ಶೇಖ್ ಸಹಚರರ ಮೇಲೆ ಶಂಕೆ ವ್ಯಕ್ತವಾಗಿದ್ದು, ಹಣಕಾಸಿನ ಕಲಹ ಮತ್ತು ವೈಯಕ್ತಿಕ ದ್ವೇಷದಿಂದ ಕೊಲೆ ನಡೆದಿದೆ ಎಂದು ಸಹಚರರು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದರು. ಇಂದು ಕಾರ್ಯಾಚರಣೆ ವೇಳೆ ಪೊಲೀಸರು 21 ನಕಲಿ ಆಧಾರ್ ಕಾರ್ಡ್‍ಗಳು, 6 ಪ್ಯಾನ್ ಕಾರ್ಡ್‍ಗಳು ಮತ್ತು 4 ವೋಟರ್ ಐಡಿಗಳನ್ನ ವಶಪಡಿಸಿಕೊಂಡಿದ್ದಾರೆ. 2022 ರಿಂದ ರಜತ್ ಮಿಶ್ರಾ ಎಂಬ ವ್ಯಕ್ತಿಯಿಂದ ನಿರ್ವಹಿಸಲ್ಪಡುವ ಜನತಾ ಪ್ರಿಂಟ್ಸ್ ಎಂಬ ವೆಬ್‍ಸೈಟ್‍ನಲ್ಲಿ 20 ರೂ.ಗೆ ನಕಲಿ ದಾಖಲೆಗಳನ್ನು ಸೃಷ್ಠಿಸಲು ಅನುಕೂಲ ಮಾಡಿಕೊಟ್ಟಿದೆ ಎಂದು ವಿಚಾರಣೆಯಲ್ಲಿ ಗೊತ್ತಾಗಿದೆ. ಬಂಧಿತರ ಪೈಕಿ ಮುನ್ನಿ ದೇವಿ ಕೂಡ ಸಿಂಡಿಕೇಟ್‍ಗೆ ಸಹಾಯ ಮಾಡುತ್ತಿದ್ದಾಳೆ ಎಂದು ಅನುಮಾನಿಸಲಾಗಿದೆ. ಈ ಸಂಘಟಿತ ಜಾಲವು ಬಾಂಗ್ಲಾದೇಶಿ ವಲಸಿಗರಿಗೆ ಅರಣ್ಯ ಮಾರ್ಗಗಳ ಮೂಲಕ ಭಾರತವನ್ನು ಪ್ರವೇಶಿಸಲು ಸಹಾಯ ಮಾಡುತ್ತಿದೆ ಮತ್ತು ಅವರಿಗೆ ನಕಲಿ ಐಡಿಗಳು, ಸಿಮ್ ಕಾರ್ಡ್‍ಗಳು ಮತ್ತು ಹಣಕಾಸಿನ ನೆರವು ನೀಡುತ್ತಿದೆ ಎಂಬ ಮಾಹಿತಿ ಇದೆ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.