ಮುಂಬೈ: ಬಾಲಿವುಡ್ ನ ಹಿರಿಯ ನಟ, ಟ್ರ್ಯಾಜಿಡಿ ಕಿಂಗ್ ದಿಲೀಪ್ ಕುಮಾರ್ ಅವರು (98) ಇಂದು ಬೆಳಗ್ಗೆ 7.30 ಸುಮಾರಿಗೆ ನಿಧನರಾಗಿದ್ದಾರೆ.
ಕಳೆದ ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಹಿಂದೂಜಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
1944ರಲ್ಲಿ ಜ್ವರ್ ಭಾತಾ ಚಿತ್ರದ ಮೂಲಕ ತಮ್ಮ ಸಿನಿ ಪಯಣ ಆರಂಭಿಸಿದ ದಿಲೀಪ್ ಕುಮಾರ್ ಅವರು ತಮ್ಮ ವೃತ್ತಿಜೀವನದಲ್ಲಿ 65 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅವುಗಳಲ್ಲಿ ಮುಖ್ಯವಾದ ಸಿನಿಮಾಗಳೆಂದರೆ ದೇವದಾಸ್, ನಯಾ ದೋರ್, ಅಂದಾಜ್, ದಾಗ್, ಕ್ರಾಂತಿ, ಮಘಲ್ ಎ ಅಝಮ್, ಗಂಗಾ ಜಮುನಾ ಮುಂತಾದ ಚಿತ್ರಗಳಿಂದ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದ್ದಾರೆ.
ಜೂನ್ 30 ರಂದು ಹಿಂದೂಜಾ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ಅವರನ್ನು ದಾಖಲಿಸಲಾಗಿತ್ತು. ಬಳಿಕ ಅವರ ಪತ್ನಿ ಸೈರಾ ಬಾನು ಖಾನ್ ಅವರು ಟ್ವೀಟ್ ಮಾಡಿ ಪತಿ ಅವರ ಆರೋಗ್ಯ ಸ್ಥಿರವಾಗಿದೆ. ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು.










