ಬಿಜೆಪಿ ಪಕ್ಷ ಅಭಿವ್ಯಕ್ತಿ ಸ್ವಾತಂತ್ರ್ಯದ ವಿರೋಧಿ ಎನ್ನುವುದಕ್ಕೆ ವಿಧಾನಸಭಾ ಕಲಾಪದ ಪ್ರತ್ಯಕ್ಷ ವರದಿ ಮಾಡದಂತೆ ಟಿವಿ ಚಾನಲ್‍ಗಳ ಮೇಲೆ ಹೇರಿರುವ ನಿರ್ಬಂಧವೇ ಸಾಕ್ಷಿ…

185
firstsuddi

ಬೆಂಗಳೂರು : ವಿಧಾನಸಭಾ ಕಲಾಪದಲ್ಲಿ ರಾಜ್ಯ ಸರ್ಕಾರ ಟಿವಿ ಚಾನಲ್‍ಗಳಿಗೆ ನಿರ್ಬಂಧ ಹೇರಿರುವ ವಿಷಯಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಟ್ವಿಟರ್ ಮೂಲಕ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಭಾರತೀಯ ಜನತಾ ಪಕ್ಷ ಅಭಿವ್ಯಕ್ತಿ ಸ್ವಾತಂತ್ರ್ಯದ ವಿರೋಧಿ ಎನ್ನುವುದಕ್ಕೆ ವಿಧಾನಮಂಡಲದ ಕಲಾಪದ ಪ್ರತ್ಯಕ್ಷ ವರದಿ ಮಾಡದಂತೆ ಟಿವಿ ಚಾನೆಲ್ಗಳ ಮೇಲೆ ಹೇರಿರುವ ನಿರ್ಬಂಧವೇ ಸಾಕ್ಷಿ. ವಿಧಾನಮಂಡಲದ ಕಲಾಪದ ವರದಿಗೆ ಸರ್ಕಾರಿ ಚಾನೆಲ್ ಚಂದನಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಸರ್ಕಾರದ ಋಣದಲ್ಲಿರುವ ಆ ಚಾನೆಲ್ ವಿರೋಧ ಪಕ್ಷಗಳ ಸದಸ್ಯರ ಮುಖಗಳನ್ನು ಮರೆಮಾಚಿ ಕೇವಲ ಸಭಾಧ್ಯಕ್ಷರ ಮುಖಾರವಿಂದ ತೋರಿಸಿ ಭಜನೆ ಮಾಡುತ್ತಿರುವುದು ವಿಷಾದನೀಯ. ಸದನದೊಳಗೆ ತಮ್ಮ ಸದಸ್ಯರು ನೀಲಿಚಿತ್ರ ನೋಡುತ್ತಾರೆಂಬ ಭಯ ಬಿಜೆಪಿಗೆ ಇದ್ದರೆ ಅವರಿಗೆ ಬುದ್ದಿ ಹೇಳಬೇಕೇ ಹೊರತು, ಅದಕ್ಕಾಗಿ ಟಿವಿ ಚಾನೆಲ್ನವರ ಕ್ಯಾಮೆರಾ ನಿರ್ಬಂಧಿಸುವುದಲ್ಲ. ನಾನು ಮುಖ್ಯಮಂತ್ರಿಯಾಗಿದ್ದಾಗಲೂ ಟಿವಿ ಚಾನೆಲ್ಗಳ ಕ್ಯಾಮೆರಾಗಳನ್ನು ನಿರ್ಬಂಧಿಸುವಂತೆ ಕೆಲವರು ಒತ್ತಾಯಿಸಿದ್ದರು. ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣಕ್ಕೆ ನಾನು ಒಪ್ಪಿರಲಿಲ್ಲ. ಟಿವಿ ಚಾನಲ್‍ಗಳ ಕ್ಯಾಮೆರಾಗಳಿಗೆ ಏಕಪಕ್ಷೀಯವಾಗಿ ನಿರ್ಬಂಧ ಹೇರಿರುವ ಸಭಾಧ್ಯಕ್ಷರ ಮಾಧ್ಯಮ ವಿರೋಧಿ ನಡವಳಿಕೆಯ ವಿರುದ್ಧ ಮಾಧ್ಯಮ ಮಿತ್ರರು ನಡೆಸುವ ಹೋರಾಟಕ್ಕೆ ನಮ್ಮ ಪಕ್ಷದ ಸಂಪೂರ್ಣ ಬೆಂಬಲ ಇದೆ ಎಂದು ಟ್ವೀಟ್ ಮಾಡಿದ್ದಾರೆ.