ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ 20 ವರ್ಷಗಳ ನಂತರ ರಣ ರೋಚಕ ಅಖಾಡ ಏರ್ಪಟ್ಟರೂ ಆಶ್ಚರ್ಯ ಇಲ್ಲ ಎಂದು ಹೇಳಲಾಗುತ್ತಿದೆ. ಗುಪ್ತ ಚೀಟಿ ಮತದಾನಕ್ಕೆ ಬಿ.ವೈ ವಿಜಯೇಂದ್ರ ವಿರೋಧಿ ಬಣದಿಂದ ಪ್ರಸ್ತಾಪಕ್ಕೆ ಸಿದ್ಧತೆ ನಡೆದಿದೆ. ಹೈಕಮಾಂಡ್ ಮುಂದೆ ವಿರೋಧಿ ಬಣದಿಂದ ಪ್ರಸ್ತಾಪ ಮಾಡಲು ಪ್ಲ್ಯಾನ್ ಮಾಡಿದ್ದಾರೆ. ಆದರೆ ಕರ್ನಾಟಕದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಇಲ್ಲಿ ತನಕ ಬ್ಯಾಲೆಟ್ ಪೇಪರ್ ಮತದಾನ ಆಗಿಯೇ ಇಲ್ಲ. ರಾಜ್ಯಾಧ್ಯಕ್ಷ ಸ್ಥಾನಕ್ಕೆ 1 ಸಲ ಗುಪ್ತ ಚೀಟಿ ಮತದಾನ ಆಗಿದ್ದರೆ, ವಿರೋಧ ಪಕ್ಷದ ಸ್ಥಾನಕ್ಕೆ 1 ಸಲ ಗುಪ್ತ ಚೀಟಿ ಮತದಾನ ಆಗಿದೆ. 1985 ರಲ್ಲಿ ಎ.ಕೆ ಸುಬ್ಬಯ್ಯ ಮತ್ತು ಬಿ.ಬಿ ಶಿವಪ್ಪ ನಡುವಿನ ಸ್ಪರ್ಧೆ, 2003 ರಲ್ಲಿ ಅನಂತ್ ಕುಮಾರ್ ಮತ್ತು ಯಡಿಯೂರಪ್ಪ ನಡುವಿನ ಸ್ಪರ್ಧೆಯಲ್ಲಿ ಅಭಿಪ್ರಾಯ ಸಂಗ್ರಹದ ಮೂಲಕ ಬಲಾಬಲ ನೋಡಿ ರಾಜ್ಯಾಧ್ಯಕ್ಷ ಹುದ್ದೆ ಘೋಷಣೆಯೂ ನಡೆದಿರುವ ಉದಾಹರಣೆಗಳು ಇವೆ. ಆದರೆ, ಬಿ.ವೈ ವಿಜಯೇಂದ್ರ ವಿರೋಧಿ ಬಣದ ಅಸ್ತ್ರಕ್ಕೆ ಬಿಜೆಪಿ ಹೈಕಮಾಂಡ್ ಒಪ್ಪುವ ಸಾಧ್ಯತೆಯೂ ಕಮ್ಮಿ ಎಂದು ಹೇಳಲಾಗಿದ್ದು, ಅಂತಿಮ ತೀರ್ಮಾನ ಕುತೂಹಲವನ್ನು ಮೂಡಿಸಿದೆ.










