ಬೆಂಗಳೂರು: ಆರ್‌ಆರ್ ನಗರ ಬಿಜೆಪಿ ಶಾಸಕ ಮುನಿರತ್ನ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರಿನ ನಂದಿನಿ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಮೊಟ್ಟೆ ಎಸೆಯಲಾಗಿದೆ. ಲಕ್ಷ್ಮೀದೇವಿ ನಗರ ವಾರ್ಡ್‍ನ ಬಿಜೆಪಿ ಕಚೇರಿಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಹೋಗುತ್ತಿದ್ದಾಗ, ಕಂಠೀರವ ಸ್ಟುಡಿಯೋ ಬಳಿ ಕಾಂಗ್ರೆಸ್ ಕಾರ್ಯಕರ್ತರು ಮುನಿರತ್ನ ಕಾರಿನ ಮೇಲೆ ಮೊಟ್ಟೆ ಎಸೆದಿದ್ದಾರೆ. ಮುನಿರತ್ನ ಮೇಲೂ ಕೂಡ ಮೊಟ್ಟೆ ಎಸೆಯಲಾಗಿದೆ. ತಮ್ಮ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ಮಾಡಲು ಮುಂದಾಗಿದ್ದಾರೆ ಎಂದು ಮುನಿರತ್ನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ನಂದಿನಿ ಲೇಔಟ್ ಠಾಣೆ ಪೊಲೀಸರು ಭೇಟಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ನಂತರ ರಸ್ತೆಯಲ್ಲೇ ಕುಳಿತು ಶಾಸಕ ಮುನಿರತ್ನ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಮೂರು ಜನರನ್ನು ಮುನಿರತ್ನ ಮೇಲೆ ಮೊಟ್ಟೆ ಎಸೆತ ಪ್ರಕರಣ ಸಂಬಂಧ ನಂದಿನಿ ಲೇಔಟ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮುನಿರತ್ನ ಬೆಂಬಲಿಗರು ಹಲ್ಲೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪ ಮಾಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರ ಕಾರನ್ನು ಜಖಂಗೊಳಿಸಿರುವ ಆರೋಪ ಕೇಳಿಬಂದಿದೆ. ಸ್ಥಳದಿಂದ ಬಿಜೆಪಿ ಶಾಸಕ ಮುನಿರತ್ನ ತೆರಳಿದ ಬಳಿಕ ಕಾಂಗ್ರೆಸ್ ಕಾರ್ಯಕರ್ತರು, ಮುನಿರತ್ನ ಬೆಂಬಲಿಗರ ನಡುವೆ ಗಲಾಟೆ ನಡೆದಿದ್ದು, 2-3 ಕಾರುಗಳು ಜಖಂಗೊಂಡಿವೆ. ಹಲವರು ಗಾಯಗೊಂಡಿದ್ದಾರೆ ಎಂದು ಮಾಹಿತಿ ತಿಳಿದುಬಂದಿದೆ . ಘಟನೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮುನಿರತ್ನ, ಕೊಲೆಗೆ ಯತ್ನ ನಡೆಯುತ್ತದೆ ಎಂದು ಪೊಲೀಸರು ನನಗೆ ಹೇಳಿದ್ದರು. ಅದಾದ ತಕ್ಷಣವೇ ಈ ಘಟನೆ ಸಂಭವಿಸಿದೆ ಎಂದು ಹೇಳಿದರು. ಈ ಹಿಂದೆಯೂ, ‘ರಾಜೀನಾಮೆ ಕೊಡಿ, ರಾಜೀನಾಮೆ ಕೊಟ್ರೆ ಜೀವ ಉಳಿಯುತ್ತೆ’ ಎಂದು ಬೆದರಿಕೆ ಕೂಡ ಹಾಕಿದ್ದರು. ಬೆದರಿಕೆ ಬಗ್ಗೆ ಪೊಲೀಸರು , ರಾಜ್ಯಪಾಲರು, ಪ್ರಧಾನಿ ಕಚೇರಿಗೆ ಪತ್ರದ ಮೂಲಕ ದೂರು ನೀಡಿದ್ದೇನೆ ಎಂದು ತಿಳಿಸಿದರು.










