ಹಾವೇರಿ: ಬೆಂಗಳೂರಿನ ನೆಲಮಂಗಲದ ಬಳಿ ಕಾರಿನ ಮೇಲೆ ಕಂಟೇನರ್ ಬಿದ್ದು ಒಂದೇ ಕುಟುಂಬದ ಆರು ಜನರು ಸಾಮನ್ನಪ್ಪಿರುವ ಘಟನೆ ಮರೆಮಾಚುವ ಮುನ್ನವೇ ಪುಣೆ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಮತ್ತೊಂದು ದುರ್ಘಟನೆ ನಡೆದಿದೆ. ಎರಡು ಕಾರುಗಳ ಮಧ್ಯೆ ಭೀಕರ ರೆಸ್ತ ಅಪಘಾತ ಸಂಭವಿಸಿದ್ದು, ಈ ದುರಂತದಲ್ಲಿ ಒಂದೇ ಕುಟುಂಬದ ನಾಲ್ಕು ಜನರು ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ತಡಸ ಕ್ರಾಸ್ ಬಳಿ ನಡೆದಿದೆ. ಮಹೇಶ್‍ಕುಮಾರ್, ಮೀನಾ, ಚಂದ್ರಮ್ಮ, ಧನ್ವೀರ್ ಮೃತರು. ಇಂದು ಪುಣೆ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48ರ ತಡಸ ಕ್ರಾಸ್ ಬಳಿ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದಾರೆ, ಇನ್ನಿಬ್ಬರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಟಾಟಾ ಅಲ್ಟ್ರೋಸ್ ಕಾರಿನಲ್ಲಿದ್ದ ಒಂದೇ ಕುಟುಂಬದ ನಾಲ್ಕು ಜನರು ಮೃತಪಟ್ಟಿದ್ದಾರೆ ಎಂದು ಮಾಹಿತಿ ತಿಳಿದುಬಂದಿದೆ.










