ಬಿಜೆಪಿ ಸರ್ಕಾರ ಜನರ ಮತ್ತು ರೈತರ ಬದುಕನ್ನು ಸರ್ವನಾಶ ಮಾಡಲು ಹೊರಟಿದೆ : ಬಿ.ಬಿ.ನಿಂಗಯ್ಯ.

71
firstsuddi

ಮೂಡಿಗೆರೆ : ಬಿಜೆಪಿ ಸರ್ಕಾರಕ್ಕೆ ಆಡಳಿತ ಮಾಡಲು ಬರುವುದಿಲ್ಲ. ಅವೈಜ್ಞಾನಿಕವಾಗಿ ಜನರ ಹಾಗೂ ರೈತ ವಿರೋಧಿ ಯೋಜನೆಗಳನ್ನು ಜಾರಿ ಮಾಡುವ ಮೂಲಕ ರೈತರ ಬದುಕನ್ನೇ ಸರ್ವನಾಶ ಮಾಡಲು ಬಿಜೆಪಿ ಸರ್ಕಾರ ಹೊರಟಿದೆ ಎಂದು ಮಾಜಿ ಸಚಿವ ಬಿ.ಬಿ.ನಿಂಗಯ್ಯ ದೂರಿದರು.

ಅವರು ಇಂದು ಪಟ್ಟಣದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು. ತಾಲೂಕಿನಲ್ಲಿ ಅನೇಕ ಜ್ವಲಂತ ಸಮಸ್ಯೆಗಳಿವೆ. ಇದರ ನಡುವೆ ಕಾಡು ಪ್ರಾಣಿಗಳ ಹಾವಳಿಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಊರುಬಗೆ ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಅರ್ಜುನ್ ಎಂಬುವರು ಹತ್ಯೆಯಾದ ಬಳಿಕ ಜನರು ರೊಚ್ಚಿಗೆದಿದ್ದಾರೆಂದು ಸರ್ಕಾರ ಕೇವಲ ಬೈರ ಎಂಬ ಒಂದು ಕಾಡಾನೆಯನ್ನು ಹಿಡಿಯಲು ಆದೇಶ ನೀಡಿ ಜನರ ಕಣ್ಣೊರೆಸುವ ಕೆಲಸ ಮಾಡಿದೆ. ಒಂದು ಕಾಡಾನೆ ಹಿಡಿಯುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ, ತಾಲೂಕಿನಲ್ಲಿ ಬೈರ ಸೇರಿದಂತೆ 3 ನರಹಂತಕ ಕಾಡಾನೆಗಳಿವೆ. ಅವುಗಳನ್ನು ಹಿಡಿಯುವ ಮೂಲಕ ಇಲ್ಲಿ ಬೀಡು ಬಿಟ್ಟಿರುವ ಎಲ್ಲಾ ಕಾಡಾನೆಗಳನ್ನು ಸ್ಥಳಾಂತರಿಸಬೇಕು. ಜೊತೆಗೆ ಹುಲಿ ಕಾಟ ಕೂಡ ಹೆಚ್ಚಾಗಿದೆ. ಮನುಷ್ಯನನ್ನು ಬಲಿ ತೆಗೆದುಕೊಳ್ಳುವ ಮುನ್ನ ಅವುಗಳನ್ನು ಹಿಡಿಯಬೇಕೆಂದು ಆಗ್ರಹಿಸಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್ ಮಾತನಾಡಿ, ಅತಿವೃಷ್ಟಿಯಿಂದ ಕೇವಲ ತೋಟಗಾರಿಕೆ ಮತ್ತು ಕೃಷಿ ಇಲಾಖೆಯಿಂದ ವರದಿ ಪಡೆದು ಅವೈಜ್ಞಾನಿಕವಾಗಿ ಪರಿಹಾರ ಕೊಡಲು ಮುಂದಾಗಿದ್ದಾರೆ. ಕಾಫಿ ಬೆಳೆ ಶೇ.80ರಷ್ಟು ಹಾನಿಯಾಗಿದೆ. ಆದರೆ ಕಾಫಿ ಬೋರ್ಡ್ ನಿಂದ ಕೇವಲ ಶೇ.18ರಷ್ಟು ಮಾತ್ರ ಕಾಫಿ ಬೆಳೆ ನಷ್ಟವಾಗಿದೆ ಎಂದು ವರದಿ ನೀಡಲಾಗಿದೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನಾಪತ್ತೆಯಾಗಿದ್ದಾರೆ. ಅವರಿಗೆ ರೈತರ ಮೇಲೆ ಕಿಂಚಿತ್ತು ಕಾಳಜಿ ಇದ್ದರೆ ಬೆಳೆ ನಷ್ಟ ವರದಿ ಪುನರ್ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಒದಗಿಸಬೇಕು. ಸರ್ಪೇಸಿ ಕಾಯಿದೆ ರದ್ದುಪಡಿಸಿ ರೈತರ ಸಾಲ ಮನ್ನಾ ಮಾಡಬೇಕು. ಬಿಪಿಎಲ್ ಕಾರ್ಡ್ ರದ್ದತಿ ಕಾಯಿದೆ ತಂದು ಅರ್ಹ ಬಿಪಿಎಲ್ ಕಾರ್ಡ್‍ದಾರರಿಂದ ದಂಡ ವಸೂಲಿ ಮಾಡಲಾಗಿದ್ದು, ಲಕ್ಷಾಂತರ ಬಡವರಿಗೆ ಅನ್ಯಾಯವಾಗಿದೆ. ಇದನ್ನು ಸರ್ಕಾರ ಸರಿಪಡಿಸಬೇಕೆಂದು ಆಗ್ರಹಿಸಿದರು. ಬಳಿಕ ತಹಸೀಲ್ದಾರ್ ನಾಗರಾಜು ಅವರಿಗೆ ಮನವಿ ಸಲ್ಲಿಸಲಾಯಿತು.

ಜೆಡಿಎಸ್ ಕ್ಷೇತ್ರ ಸಮಿತಿ ಅಧ್ಯಕ್ಷ ಡಿ.ಜೆ.ಸುರೇಶ್, ಜಿ.ಪಂ. ಮಾಜಿ ಸದಸ್ಯ ನಿಖಿಲ್ ಚಕ್ರವರ್ತಿ, ಮುಖಂಡರಾದ ಗಬ್ಬಳ್ಳಿ ಚಂದ್ರೇಗೌಡ, ಲೋಹಿತ್ ಬಿದರಹಳ್ಳಿ, ಸುಧಾ ಮಂಜುನಾಥ್, ಲಕ್ಷ್ಮಣ್ ಹುಣಸೆಮಕ್ಕಿ, ನೀಲಯ್ಯ ಕಳಸ, ಬಿ.ಎಂ.ಬೈರೇಗೌಡ, ಸಂದೀಪ್ ನಂದಿಪುರ, ಸಾಲುಮರ ಪ್ರಕಾಶ್, ಪ್ರಹ್ಲಾದ್ ಜನ್ನಾಪುರ ಮತ್ತಿತರರಿದ್ದರು.