ಮಂಡ್ಯ : ಕೇಂದ್ರ ಸರ್ಕಾರದಿಂದ ನೆರೆ ಪರಿಹಾರ ಹಣವನ್ನು ತರುವ ವಿಷಯದಲ್ಲಿ ರಾಜ್ಯದ ಸಂಸದರನ್ನು ಸಮರ್ಥಿಸಿಕೊಂಡಿದ್ದ ಸಂಸದೆ ಸುಮಲತಾ ಅಂಬರೀಶ್ ಅವರು ಬಿಜೆಪಿ ಪಕ್ಷ ಸೇರುತ್ತಾರ ಎಂಬ ಪ್ರಶ್ನೆ ಎದ್ದಿತ್ತು. ಈ ಪ್ರಶ್ನೆಗೆ ಉತ್ತರ ನೀಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಇಂದು ಮಂಡ್ಯ ಬಿಜೆಪಿ ಕಚೇರಿಯಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮೊದಲೇ 4-5 ಬಾರಿ ಬಿಜೆಪಿ ಸಭೆಗೆ ಬರಬೇಕಾಗಿತ್ತು. ಆದರೆ ಕಾರಣಾಂತರದಿಂದ ಬರಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಇಂದು ಬಂದಿದ್ದೇನೆ. ಲೋಕಸಭಾ ಚುನಾವಣೆ ವೇಳೆ ಕ್ಷೇತ್ರದಲ್ಲಿ ಬಿಜೆಪಿ ಸ್ಪರ್ಧಿಯನ್ನು ಹಾಕದೆ ಬಿಜೆಪಿ ಕಾರ್ಯಕರ್ತರು ನನ್ನ ಪರವಾಗಿ ಕೆಲಸ ಮಾಡಿದ್ದಾರೆ. ಹೀಗಾಗಿ ನಾನು ಅವರಿಗೆ ಧನ್ಯವಾದ ತಿಳಿಸಲು ಬಂದಿದ್ದೇನೆ. ನಾನು ಬಿಜೆಪಿ ಪಕ್ಷಕ್ಕೆ ಸೇರುವುದಾದರೆ ಎಲ್ಲರಿಗೂ ತಿಳಿಸಿ ಅಧಿಕೃತವಾಗಿ ಸೇರುತ್ತೇನೆ. ಅದನ್ನು ಬಿಟ್ಟು ಮುಚ್ಚಿಟ್ಟು ಬಿಜೆಪಿ ಪಕ್ಷ ಸೇರುವುದಿಲ್ಲ ಎಂದರು. ಇದೇ ವೇಳೆ ಸುಮಲತಾ ಅವರು ಫಾರಿನ್ ಟೂರ್ ಹೋಗಿದ್ದಾರೆ ಎಂಬ ಹೆಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಯಿಸಿದ್ದು, ಫಾರಿನ್ ಟೂರ್ ಹೋಗಿದವರು ಯಾರೆಂದು ಎಲ್ಲರಿಗೂ ತಿಳಿದಿದೆ. ಫಾರಿನ್ ಟೂರ್ ಹೋಗಿರುವ ಫೋಟೋಗಳು ಸಹ ಇದೆ. ಅಲ್ಲದೇ ಈ ಬಗ್ಗೆ ಮಾಧ್ಯಮಗಳು ಕೂಡಾ ಸುದ್ದಿ ಪ್ರಸಾರ ಮಾಡಿದೆ. ಈ ಬಗ್ಗೆ ನಾನು ಹೆಚ್ಚಾಗಿ ಮಾತನಾಡುವುದಿಲ್ಲ ಎಂದರು.










