ಬಿಲ್ಕಿಸ್ ಬಾನು ಅತ್ಯಾಚಾರ ಕೇಸ್ ; ಅಪರಾಧಿಗಳ ಬಿಡುಗಡೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ಒಪ್ಪಿಗೆ…

63
firstsuddi

ನವದೆಹಲಿ : ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣ ಸಂಬಂಧ 11 ಅಪರಾಧಿಗಳನ್ನು ಗುಜರಾತ್ ಸರ್ಕಾರ ಜೈಲಿನಿಂದ ಬಿಡುಗಡೆ ಮಾಡಿದ್ದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಈ ಅರ್ಜಿ ವಿಚಾರಣೆ ನಡೆಸಲು ಪೀಠ ಒಪ್ಪಿಗೆ ಸೂಚಿಸಿದೆ.

ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಪೀಠದ ಮುಂದೆ ಹಿರಿಯ ವಕೀಲರಾದ ಕಪಿಲ್ ಸಿಬಲ್, ಅಭಿಷೇಕ್ ಸಿಂಘ್ವಿ ಮತ್ತು ಅಪರ್ಣಾ ಭಟ್ ಅವರು ಮೇಲ್ಮನವಿ ಅರ್ಜಿ ಪ್ರಸ್ತಾಪ ಮಾಡಿದರು. ಈ ವೇಳೆ, ಪ್ರಕರಣ ಪರಿಶೀಲಿಸುವುದಾಗಿ ಪೀಠವು ತಿಳಿಸಿದೆ.

ಸಿಪಿಐ(ಎಂ) ನಾಯಕಿ ಸುಭಾಸಿನಿ ಅಲಿ, ಫ್ರೀಲ್ಯಾನ್ಸ್ ಪತ್ರಕರ್ತೆ ಮತ್ತು ಚಲನಚಿತ್ರ ನಿರ್ಮಾಪಕಿ ರೇವತಿ ಲಾಲ್, ಮಾಜಿ ತತ್ವಶಾಸ್ತ್ರ ಪ್ರೊಫೆಸರ್ ಮತ್ತು ಕಾರ್ಯಕರ್ತ ರೂಪ್ ರೇಖ್ ವರ್ಮಾ, ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಮತ್ತು ಇತರ ಅರ್ಜಿದಾರರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.

ಜನವರಿ 21, 2008 ರಂದು ಮುಂಬೈನ ವಿಶೇಷ ಕೇಂದ್ರೀಯ ತನಿಖಾ ದಳ (ಸಿಬಿಐ) ನ್ಯಾಯಾಲಯವು ಬಿಲ್ಕಿಸ್ ಬಾನು ಅವರ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕುಟುಂಬದ ಏಳು ಸದಸ್ಯರ ಹತ್ಯೆಯ ಆರೋಪದ ಮೇಲೆ 11 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ನಂತರ ಅವರ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್ ಎತ್ತಿ ಹಿಡಿಯಿತು. ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಎಲ್ಲಾ ಹನ್ನೊಂದು ಅಪರಾಧಿಗಳನ್ನು ಗುಜರಾತ್ ಸರ್ಕಾರವು ಆಗಸ್ಟ್ 15 ರಂದು ಬಿಡುಗಡೆ ಮಾಡಿತ್ತು.