ಬೆಂಗಳೂರು: ಏರೋನಿಕ್ಸ್ ಇಂಟರ್‌ನೆಟ್ ಕಂಪನಿ ಎಂಡಿ, ಸಿಇಒ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ನಗರದ ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗ ಮೂಲದ ಫಿಲೆಕ್ಸ್, ಶಿವು ಮತ್ತು ಬೆಂಗಳೂರಿನ ರೂಪೇನಾ ಅಗ್ರಹಾರದ ವಿನಯ್ ರೆಡ್ಡಿ ಬಂಧಿತ ಆರೋಪಿಗಳು.
ನಿನ್ನೆ ಸಂಜೆ ಮಾರಕಾಸ್ತ್ರ ಹಿಡಿದು ಕಂಪನಿ ಕಚೇರಿಗೆ ನುಗ್ಗಿದ ಫಿಲೆಕ್ಸ್ ಹಾಗೂ ಇತರರು ಖಾಸಗಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಫಣೀಂದ್ರ ಸುಬ್ರಹ್ಮಣ್ಯಂ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿನುಕುಮಾರ್ ಅವರನ್ನು ಹತ್ಯೆ ಮಾಡಿ ಪರಾರಿಯಾಗಿದ್ದರು. ಇದೀಗ ಮೂವರು ಆರೋಪಿಗಳು ಅರೆಸ್ಟ್ ಆಗಿದ್ದಾರೆ.
ಆರೋಪಿ ಜೋಕರ್ ಫಿಲೆಕ್ಸ್, ಏರೋನಿಕ್ಸ್ ಇಂಟರ್‌ನೆಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಎಂಡಿ ಫಣೀಂದ್ರ ಸುಬ್ರಹ್ಮಣ್ಯಂ, ಫಿಲೆಕ್ಸ್ನನ್ನು ಕೆಲಸದಿಂದ ತೆಗೆದು ಹಾಕಿದ್ದ. ಜೊತೆಗೆ ಕೆಲಸದ ವೇಳೆ ಫಿಲೆಕ್ಸ್ನನ್ನು ನಿಂದಿಸುತ್ತಿದ್ದ ಆರೋಪ ಮಾಡಿದ್ದ ಇತ, ಇದೇ ದ್ವೇಷದ ಹಿನ್ನೆಲೆ ಫಿಲೆಕ್ಸ್, ಫಣೀಂದ್ರನನ್ನು ಕೊಲೆ ಮಾಡಿದ್ದಾನೆ. ಆದರೆ ಆರೋಪಿಗಳಾದ ವಿನಯ್ ಹಾಗೂ ಶಿವು ಎನ್ನುವವರಿಗೆ ಹತ್ಯೆ ಮಾಡುವ ಯಾವುದೇ ಉದ್ದೇಶ ಇರಲಿಲ್ಲ, ಫಿಲೆಕ್ಸ್ ಮಾತನ್ನ ಕೇಳಿ ಹತ್ಯೆಗೆ ಕೈ ಜೋಡಿಸಿದ್ದಾರೆ. ಇನ್ನು ಈ ವೇಳೆ ಎಂಡಿಯನ್ನು ರಕ್ಷಿಸಲು ಬಂದ ವಿನುಕುಮಾರ್ ಮೇಲೂ ಹಲ್ಲೆ ಮಾಡಿ ಕೊಲೆ ಮಾಡಿದ್ದ. ಇದೀಗ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ತುಮಕೂರು ಜಿಲ್ಲೆಯ ಕುಣಿಗಲ್ನಲ್ಲಿ ಬಂಧಿಸಲಾಗಿದೆ.










