ಬೆಂಗಳೂರು : ಸರಣಿ ಅಪಘಾತದಲ್ಲಿ ಓರ್ವ ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ.
ಇಂದಿರಾನಗರ 80ನೇ ಅಡಿ ರಸ್ತೆಯಲ್ಲಿ ಬರುವ ತಿಪ್ಪಸಂದ್ರ ಬಳಿ ಮಧ್ಯಾಹ್ನದ ವೇಳೆಗೆ ಈ ಘಟನೆ ನಡೆದಿದ್ದು, ಅಪಘಾತದಲ್ಲಿ ಅಸ್ಸೋಂ ಮೂಲದ ಹರಿತಾಪ ಸಾವನ್ನಪ್ಪಿದ್ದಾನೆ. ಇನ್ನು ಬೆಂಜ್ ಕಾರಿನ ಚಾಲಕ ಸುವೀದ್ ಗಂಭೀರವಾಗಿ ಗಾಯಗೊಂಡಿದ್ದು, ಮಣಿಪಾಲ್ ಆಸ್ಪತ್ರೆಗೆ ಸೇರಿಸಲಾಗಿದೆ.
ವೇಗವಾಗಿ ಬೆಂಜ್ ಕಾರು ಚಲಾಯಿಸಿದ್ದರಿಂದ ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ಮತ್ತೊಂದು ಕಾರಿಗೆ ಹೊಡೆದ ಪರಿಣಾಮ ಮುಂದಿನ ಎರಡು ಆಟೋ ಹಾಗೂ ಒಂದು ಮಿನಿ ಲಾರಿ ಮಧ್ಯೆ ಅಪಘಾತವಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ಜಖಂ ಆಗಿದೆ.
ನಂದಿತಾ ಚೌಂದ್ರಿ ಅವರಿಗೆ ಈ ಬೆಂಜ್ ಕಾರು ಸೇರಿದೆ. ಬೆಂಜ್ ಕಾರಿನ ಚಾಲಕನ ಅತಿ ವೇಗದಿಂದಲೇ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಹಲವರಿಗೆ ಗಾಯವಾಗಿದೆ. ಹಲಸೂರು ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.










