ಚಿಕ್ಕಮಗಳೂರು: ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಯಾತ್ರೆ ಹೊರಟಿದ್ದ ಯಾತ್ರಾರ್ಥಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸರ್ಕಾರಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಮೃತನನ್ನು ಬೆಂಗಳೂರಿನ ಕಲಾಸಿಪಾಳ್ಯ ನಿವಾಸಿಯಾದ ಮಧುಸೂದನ್ (52) ಎಂದು ಗುರುತಿಸಲಾಗಿದೆ. ಮೃತ ಮಧುಸೂದನ್ ಮೂಲತಃ ಆಂಧ್ರಪ್ರದೇಶದ ಅನಂತಪುರದವರಾಗಿದ್ದು, ಬೆಂಗಳೂರಿನಲ್ಲಿ ವಾಸವಿದ್ದರು. ಮೃತ ಮಧುಸೂದನ್ ತನ್ನ 12 ಜನ ಸ್ನೇಹಿತರೊಂದಿಗೆ ಟಿಟಿ ವಾಹನ ಮಾಡಿಕೊಂಡು ಧರ್ಮಸ್ಥಳಕ್ಕೆ ಯಾತ್ರೆ ಹೊರಟಿದ್ದರು. ಟಿಟಿ ವಾಹನ ಕೊಟ್ಟಿಗೆಹಾರಕ್ಕೆ ಬರುತ್ತಿದ್ದಂತೆ ವಾಹನವನ್ನ ಶೌಚಾಲಯಕ್ಕೆ ನಿಲ್ಲಿಸಿದ್ದರು. ಈ ವೇಳೆ ಶೌಚಾಲಯಕ್ಕೆ ಹೋಗಿದ್ದ ಮಧುಸೂದನ್, ಶೌಚಾಲಯದಲ್ಲೇ ಹೃದಯಾಘಾತದಿಂದ ಕುಸಿದು ಬಿದ್ದಿದ್ದರು.
ಈ ವೇಳೆ ಜೊತೆಗಿದ್ದ ಸ್ನೇಹಿತರು ಹಾಗೂ ಸ್ಥಳೀಯರು ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲು ಮುಂದಾದರು. ಕೊಟ್ಟಿಗೆಹಾರದ ಸಮಾಜ ಸೇವಕ ಆರಿಫ್ ಕೂಡಲೇ ಅಂಬುಲೆನ್ಸ್ ತಂದು ಬಣಕಲ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲು ಕರೆದೊಯ್ದರು. ಆದರೆ ತೀವ್ರ ಹೃದಯಾಘಾತಕ್ಕೊಳಗಾಗಿದ್ದ ಮಧುಸೂದನ್ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾರೆ.
ಈ ಕುರಿತು ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.