ಬೆಂಗಳೂರು: ಎಳನೀರು ಕದ್ದು ಮಾರುತ್ತಿದ್ದ ವ್ಯಕ್ತಿಯ ಬಂಧನ…

57
firstsuddi

ಬೆಂಗಳೂರು: ಎಳನೀರನ್ನು ಕದ್ದು ಮಾರುತ್ತಿದ್ದ ಆರೋಪಿಯನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ.

ಮೋಹನ್ ಬಂಧಿತ ಆರೋಪಿ. ಮೂಲತಃ ತಮಿಳುನಾಡಿನವನಾದ ಆರೋಪಿ ಮೋಹನ್, ಮಡಿವಾಳದಲ್ಲಿ ವಾಸವಾಗಿದ್ದ. ಕಳೆದ ಮೂರು ತಿಂಗಳಿಂದ ನಗರದಲ್ಲಿ ಕೃತ್ಯ ಎಸಗುತ್ತಿದ್ದನು. ರಾತ್ರಿ ವೇಳೆ ಕಾರ್​ನಲ್ಲಿ ಬಂದು ರಸ್ತೆಯ ಪಕ್ಕ ಇಟ್ಟ ಎಳನೀರುಗಳನ್ನು ಕದಿಯುತ್ತಿದ್ದನು.
ಇತ್ತೀಚೆಗೆ ಗಿರಿನಗರದ ಮಂಕುತಿಮ್ಮನ ಪಾರ್ಕ್ ಬಳಿ ವ್ಯಾಪಾರಿ ರಾಜಣ್ಣ ಎಂಬುವರು ಮಾರಾಟ ಮಾಡಲು 12 ಸಾವಿರ ಎಳನೀರು ತಂದಿದ್ದರು. ಆದರೆ ಬೆಳಿಗ್ಗೆ ಅಂಗಡಿಗೆ ಬಂದು ನೋಡಿದಾಗ ಎಳನೀರು ಕಾಣೆಯಾಗಿದ್ದವು. ಈ ಹಿನ್ನೆಲೆಯಲ್ಲಿ ರಾಜಣ್ಣ ಅವರು ಗಿರಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡು ಸಿಸಿಟಿವಿ ಪರಿಶೀಲನೆ ನಡೆಸಿದಾಗ ಪೊಲೀಸರಿಗೆ ಶಾಕ್ ಆಗಿತ್ತು. ರಾತ್ರಿ ವೇಳೆ ಕಾರಿನಲ್ಲಿ ಬಂದು ಎಳನೀರು ಕದಿಯುತ್ತಿದ್ದ ಆಸಾಮಿ ಮೋಹನ್ ಎಂಬುದು ಖಚಿತವಾಗಿ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಪೊಲೀಸರು ಕಳ್ಳತನಕ್ಕೆ ಬಳಸಿದ್ದ ಕಾರು, ಒಂದು ಎನ್ ಫೀಲ್ಡ್ ಬೈಕ್ ಸಹಿತ 8 ಲಕ್ಷ ಮೌಲ್ಯದ ವಸ್ತುಗಳು ವಶಕ್ಕೆ ಪಡೆದಿದ್ದಾರೆ.

ಎಳನೀರು ಕದ್ದ ಪ್ರಕರಣ ಸಂಬಂಧ ಆರೋಪಿ ಮೋಹನ್ ನನ್ನು ವಿಚಾರಣೆ ಮಾಡುವ ವೇಳೆ ಎಳನೀರು ಕಳ್ಳನ ಇನ್ನೊಂದು ಪ್ರಕರಣ ಬಯಲಿಗೆ ಬಂದಿದೆ. ಮೋಹನ್ ಈ ಹಿಂದೆ ಎಳನೀರು ವ್ಯಾಪಾರಿಯಾಗಿದ್ದನು. ಜೂಜಾಟದ ಹುಚ್ಚು ಹತ್ತಿಸಿಕೊಂಡಿದ್ದ ಆರೋಪಿ, ಆನ್‌ಲೈನ್ ನಲ್ಲಿ ರಮ್ಮಿ ಆಡಿ ಲಕ್ಷ ಲಕ್ಷ ಹಣ ಸಾಲ ಮಾಡಿಕೊಂಡಿದ್ದನು. ಸಾಲ ಜಾಸ್ತಿ ಆಗಿದ್ದರಿಂದ ಎಳನೀರು ಕಳ್ಳತನಕ್ಕೆ ಪ್ಲಾನ್ ಮಾಡಿದ್ದ ಮೋಹನ್, ಪ್ರತಿದಿನ ರಾತ್ರಿ ಕಾರು ಬಾಡಿಗೆಗೆ ಪಡೆದು ಎಳನೀರು ಕಳ್ಳತನಕ್ಕೆ ಬರುತ್ತಿದ್ದ.

ಕದ್ದ ಎಳನೀರನ್ನು ಮಾರಲು ಗ್ರಾಹಕರನ್ನು ಸಹ ಹುಡುಕಿಕೊಂಡಿದ್ದನು. ಪ್ಯ್ಲಾನ್ ಪ್ರಕಾರ ಎಲ್ಲ ಸೆಟ್ ಆದ ಮೇಲೆ ಪ್ರತಿರಾತ್ರಿ 100 ಎಳನೀರನ್ನು ಕದ್ದು ಕ್ಯಾಬ್​ನಲ್ಲಿ ಹಾಕಿಕೊಂಡು ಮನೆಗೆ ಹೋಗುತ್ತಿದ್ದನು.

ಬೆಳಗ್ಗೆ ಎಳನೀರನ್ನು ಮಾರಿ ಹಣ ಪಡೆಯುತ್ತಿದ್ದನು. ಇದೇ ರೀತಿ ಕಳೆದ ಮೂರು ತಿಂಗಳಿಂದ ಕಳ್ಳತನ ಮಾಡುತ್ತಿದ್ದನು. ಎಳನೀರು ಕಳೆದುಕೊಂಡು ವ್ಯಾಪಾರಿಗಳು ಯಾರು ದೂರು ನೀಡಲು ಮುಂದಾಗಿರಲಿಲ್ಲ. ಕೊನೆಗೆ ರಾಜಣ್ಣ ಎಂಬುವವರು ದೂರು ಕೊಟ್ಟ ಬಳಿಕ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.