ಬೆಂಗಳೂರು :ಬಿ.ಎಸ್‌.ಯಡಿಯೂರಪ್ಪ ಅವರಿಗೆ ಕೊರೊನಾ ವೈರಸ್ ಸೋಂಕು,ಮಣಿಪಾಲ್ ಆಸ್ಪತ್ರೆಗೆ ದಾಖಲು.

378
firstsuddi

ಬೆಂಗಳೂರು :ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮತ್ತೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ  ಇಂದು ಚಿಕಿತ್ಸೆಗಾಗಿ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮುಖ್ಯಮಂತ್ರಿಗಳು ಜ್ವರದಿಂದ ಬಳಲುತ್ತಿದ್ದ ಹಿನ್ನಲೆಯಲ್ಲಿ ಇಂದು ರಾಮಯ್ಯ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ವರದಿಯಲ್ಲಿ ಪಾಸಿಟಿವ್ ಬಂದಿದೆ. ಬಳಿಕ, ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

ಈ ಬಗ್ಗೆ ಯಡಿಯೂರಪ್ಪ ಅವರ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಲಾಗಿದ್ದು, ‘ಜ್ವರದ ಹಿನ್ನೆಲೆಯಲ್ಲಿ ಇಂದು ತಪಾಸಣೆಗೆ ಒಳಪಟ್ಟಾಗ ಕೋವಿಡ್ ಪರೀಕ್ಷಾ ವರದಿ ಪಾಸಿಟಿವ್ ಬಂದಿರುತ್ತದೆ. ಅಲ್ಪ ಪ್ರಮಾಣದಲ್ಲಿ ರೋಗ ಲಕ್ಷಣಗಳಿರುವುದರಿಂದ ವೈದ್ಯರ ಸಲಹೆಯಂತೆ ಮಣಿಪಾಲ್ ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆ. ಕಳೆದ ಕೆಲವು ದಿನಗಳಲ್ಲಿ ಸಂಪರ್ಕಕ್ಕೆ ಬಂದಿದ್ದವರು ಕ್ವಾರಂಟೈನ್‌ನಲ್ಲಿದ್ದು, ಒಮ್ಮೆ ಪರೀಕ್ಷಿಸಿಕೊಳ್ಳಿ ಎಂದು ಕೋರುತ್ತೇನೆ’ ಎಂದಿದ್ದಾರೆ.

ಬೆಳಿಗ್ಗೆ ರಾಜ್ಯದಲ್ಲಿ ಕೋವಿಡ್‌-19 ಪರಿಸ್ಥಿತಿ ಕುರಿತು ಚರ್ಚೆ ನಡೆಸಿದ ನಂತರ ಪರೀಕ್ಷೆಗಾಗಿ ಆಸ್ಪತ್ರೆಗೆ ತೆರಳಿದರು.

ಸಭೆಯ ನಂತರ ಮಾತನಾಡಿದ್ದ ಸಿಎಂ, ‘ಏಪ್ರಿಲ್‌ 20ರ ವರೆಗೂ ಬೆಂಗಳೂರು ಸೇರಿ ಇತರೆ ಜಿಲ್ಲೆಗಳಲ್ಲಿ ವಿಧಿಸಿರುವ ರಾತ್ರಿ ಕರ್ಫ್ಯೂ ನಿರ್ಬಂಧಗಳು ಮುಂದುವರಿಯಲಿವೆ. ಬೇರೆ ಜಿಲ್ಲೆಗಳಿಗೆ ಕರ್ಫ್ಯೂ ವಿಸ್ತರಿಸುವ ಬಗ್ಗೆ 20 ರಂದು ಸಭೆ ನಡೆಸಿ ತೀರ್ಮಾನ ಮಾಡಲಾಗುವುದು’ ಎಂದರು.

ಎರಡು ದಿನಗಳಿಂದ ಜ್ವರದಿಂದ ಬಳಲುತ್ತಿದ್ದು, ಯಡಿಯೂರಪ್ಪ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಗಾದರು. ಅಲ್ಲಿ ಕೋವಿಡ್‌ ಪಾಸಿಟಿವ್ ಬಂದಿರುವ ಕಾರಣ, ಮುಂದಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.

ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರದಲ್ಲಿದ್ದಾಗಲೇ ಜ್ವರ ಕಾಣಿಸಿಕೊಂಡಿತ್ತು. ಪ್ರವಾಸ ಮೊಟಕುಗೊಳಿಸಿ ಬಂದಿದ್ದ ಅವರು ಗುರುವಾರ ಮತ್ತು ಶುಕ್ರವಾರ ಅಧಿಕಾರಿಗಳ ಸಭೆ ನಡೆಸಿದ್ದರು.