ಬೆಂಗಳೂರು : ಯುವತಿಯ ಮೇಲೆ ಸಾಮೂಹಿಕ ಅತ್ಯಾಚರವೆಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಇಂದು ಬೆಳಗ್ಗೆ ಸ್ಥಳ ಮಹಜರಿಗೆ ಆರೋಪಿಗಳ ಪೈಕಿ ಇಬ್ಬರನ್ನು ಸ್ಥಳ ಮಹಜರಿಗೆಂದು ಚನ್ನಸಂದ್ರ ಕನಕ ನಗರದ ಬಳಿ ಕರೆದೊಯ್ಯುವಾಗ ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ಮಾಡಿದ್ದು, ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಮೊದಲು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಪೊಲೀಸರು ಸೂಚಿಸಿದ್ದಾರೆ. ಆದರೆ ಆರೋಪಿಗಳು ಹಲ್ಲೆ ಮುಂದುವರಿಸಿದ್ದು, ಆತ್ಮರಕ್ಷಣೆಗಾಗಿ ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.
ಬಾಂಗ್ಲಾ ಮೂಲದ ರಿದಯ್ ಬಾಬು ಹಾಗೂ ಸಾಗರ್ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದು, ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ನಗರದಲ್ಲಿ ಬಾಂಗ್ಲಾ ಯುವತಿಯ ಮೇಲೆ ಗ್ಯಾಂಗ್ ರೇಪ್ ನಡೆದಿತ್ತು. ಆರೋಪಿಗಳು ಬಾಂಗ್ಲಾ ಮೂಲದವರಾಗಿದ್ದು, ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದರು. ಸಂತ್ರಸ್ಥೆ ಸೇರಿದಂತೆ ಆರೋಪಿಗಳು ರಾಮಮೂರ್ತಿ ನಗರದ ಎನ್.ಆರ್.ಐ ಲೇಔಟ್ ನಲ್ಲಿ ವಾಸವಾಗಿದ್ದರು. ಯುವತಿಯನ್ನು ಅತ್ಯಾಚಾರಗೈದು ಗುಪ್ತಾಂಗಕ್ಕೆ ಮದ್ಯದ ಬಾಟೆಲ್ ಇರಿಸಿ ವಿಕೃತಿ ಮರೆದಿದ್ದಾರೆ. ಈ ಎಲ್ಲ ಘಟನೆಯನ್ನು ಕಿರಾತಕರು ವೀಡಿಯೋ ಮಾಡಿದ್ದಾರೆ. 10 ದಿನಗಳ ಹಿಂದೆ ಈ ಘಟನೆ ನಡೆದಿದ್ದು, ವೀಡಿಯೋ ವೈರಲ್ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಯುವತಿಯ ಮೇಲೆ ದ್ವೇಷಕ್ಕಾಗಿ ಅತ್ಯಾಚಾರ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ತಿಳಿಯುತ್ತಿದ್ದಂತೆ ರಾಮಮೂರ್ತಿ ನಗರ ಠಾಣಾ ಪೊಲೀಸರು ಸಾಗರ್, ಮೊಹಮ್ಮದ್ ಬಾಬಾ ಶೇಕ್, ರಿದಾಯ್ ಬಾಬು ಹಾಗೂ ಹಕೀಲ್ ಹಾಗೂ ಓರ್ವ ಯುವತಿಯನ್ನು ಬಂಧಿಸಿದ್ದಾರೆ. ಇನ್ನಿಬ್ಬರು ಪರಾರಿಯಾಗಿದ್ದು, ಅವರಿಗಾಗಿ ಬಲೆ ಬೀಸಿದ್ದಾರೆ.










