ಬೆಂಗಳೂರು : 72ನೇ ಗಣರಾಜ್ಯೋತ್ಸವ ಆಚರಣೆಗೆ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಸಿದ್ಧತೆ: ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ…

148

ಬೆಂಗಳೂರು: 72ನೇ ಗಣರಾಜ್ಯೋತ್ಸವ ಆಚರಣೆಗೆ ನಗರ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪರೇಡ್ ಮೈದಾನ ಸಿದ್ಧತೆಗೊಂಡಿದ್ದು, ಕೋವಿಡ್ ಮಾರ್ಗಸೂಚಿ ಅನ್ವಯ ಕಾರ್ಯಕ್ರಮವನ್ನು ಅತ್ಯಂತ ಸರಳವಾಗಿ ಆಚರಿಸಲಾಗುತ್ತದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತರಾದ ಎನ್ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.
ಪ್ರತಿವರ್ಷ ನಡೆಯುತ್ತಿದ್ದ ಗಣರಾಜ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಈ ಬಾರಿ ರದ್ದುಮಾಡಲಾಗಿದ್ದು, ಕಾರ್ಯಕ್ರಮದಲ್ಲಿ ಕೇವಲ 500 ಆಸನಗಳ ವ್ಯವಸ್ಥೆ ಮಾಡಲಾಗಿದೆ. ಈ ವರ್ಷದ ಕಾರ್ಯಕ್ರಮವು ಕೇವಲ 40 ನಿಮಿಷದಲ್ಲಿ ಮುಗಿಯಲಿದೆ ಎಂದು ಅವರು ತಿಳಿಸಿದರು.
ಇಂದು ನಗರದ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಮಾತಾನಾಡಿದ ಅವರು, ಗಣರಾಜ್ಯೋತ್ಸವ ದಿನದಂದು ಬೆಳಿಗ್ಗೆ 8:50ಕ್ಕೆ ರಾಜ್ಯಪಾಲರು ಆಗಮಿಸಲಿದ್ದು, ಭಾರತೀಯ ರಕ್ಷಣಾ ಸೇವೆಯ ಗೌರವ ವಂದನೆಯನ್ನು ಸ್ವೀಕರಿಸಿ, ನಂತರ 9 ಗಂಟೆಗೆ ಧ್ವಜಾರೋಹಣ ಮಾಡಲಿದ್ದಾರೆ ಎಂದು ಆಯುಕ್ತರು ತಿಳಿಸಿದರು.
ಕಾರ್ಯಕ್ರಮದ ವೀಕ್ಷಣೆಗೆ ಈ ಬಾರಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಪಾಸ್ ಹೊಂದಿರುವ ಗಣ್ಯರು, ಹಾಗೂ ವಿಶೇಷ ಆಹ್ವಾನಿತರು ಸೇರಿ 500 ಮಂದಿಗೆ ಮಾತ್ರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದ್ದು, ಈ ಬಾರಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುವುದಿಲ್ಲ. ಆದರೆ ನಾಡಗೀತೆ, ರೈತ ಗೀತೆ, ಪೊಲೀಸ್ ಮಿಲಿಟರಿ ಪಡೆಗಳಿಂದ ಪರೇಡ್, ರಾಜ್ಯಪಾಲರಿಂದ ರಾಜ್ಯದ ಜನತೆಗೆ ಸಂದೇಶ, ರಾಷ್ಟ್ರಗೀತೆ, ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.