ಬೆಳಗಾವಿಯಲ್ಲಿ ಖಾದಿ ಉತ್ಸವ, ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಭರ್ಜರಿ ರೆಸ್ಪಾನ್ಸ್.

28

ಬೆಳಗಾವಿ: ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ನಿಮಿತ್ತ ಬೆಳಗಾವಿಯಲ್ಲಿ ಆಯೋಜಿಸಿರುವ ಅಸ್ಮಿತೆ ಮಾರಾಟ ಮೇಳ, ಸರಸ್ ಮೇಳಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜನರ ದಂಡೇ ಹರಿದು ಬರುತ್ತಿದೆ. ನಾಲ್ಕು ದಿನಗಳಲ್ಲಿ ಬರೋಬ್ಬರಿ 1.03 ಕೋಟಿ ರೂಪಾಯಿ ವ್ಯಾಪಾರ ವಹಿವಾಟು ಮಾಡಲಾಗಿದೆ. ಬೆಳಗಾವಿ ಸರ್ದಾರ ಮೈದಾನದಲ್ಲಿ ಡಿಸೆಂಬರ್ 26 ರಿಂದ ಜನವರಿ 4 ರವರೆಗೆ ನಡೆಯುತ್ತಿರುವ ಸರಸ್ ಮೇಳ-ಖಾದಿ ಉತ್ಸವ, ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಜನಾಕರ್ಷಣೀಯ ಕೇಂದ್ರ ಬಿಂದುವಾಗಿ ಮಾರ್ಪಾಡಾಗಿದೆ. ಡಿಸೆಂಬರ್ 26 ರಂದು ಸಿಎಂ ಸಿದ್ದರಾಮಯ್ಯ ರವರು ಚಾಲನೆ ನೀಡಿದ್ದರು. ರಾಜ್ಯದ ಜಿಲ್ಲೆ, ತಾಲೂಕುಗಳಿಂದ ಸ್ವ-ಸಹಾಯ ಗುಂಪಿನ ಮಹಿಳೆಯರು ಪ್ರಮುಖ ಉತ್ಪನ್ನಗಳೊಂದಿಗೆ ಭಾಗವಹಿಸಿದ್ದು, ವ್ಯಾಪಾರದಲ್ಲಿ ತೊಡಗಿಕೊಂಡಿದ್ದರು. ಹೊರ ರಾಜ್ಯಗಳ ಖಾದಿ ಕಸಬುದಾರರು ತಮ್ಮ ಉತ್ಪನ್ನಗಳನ್ನು ತಂದಿದ್ದಾರೆ. ಒಟ್ಟು 200 ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, 150 ಸ್ವಸಹಾಯ ಸಂಘಗಳು, 50 ಖಾದಿ ಉತ್ಪನ್ನಗಳು ಮತ್ತು 10 ಆಹಾರ ಮಳಿಗೆಗಳು ವ್ಯಾಪಾರವನ್ನು ನಡೆಸುತ್ತಿವೆ. ಪ್ರತಿಯೊಂದು ಮಳಿಗೆಗಳಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದ ಸ್ವ- ಸಹಾಯ ಗುಂಪಿನ ಮಹಿಳೆಯರು ಉತ್ಪಾದಿಸಿರುವ ಉತ್ಪನ್ನಗಳ ಮಹಾಪೂರವೇ ಹರಿದು ಬಂದಿದ್ದು, ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಚನ್ನಪಟ್ಟಣದ ಮರದ ಗೊಂಬೆಗಳು, ಮೊಳಕಾಲ್ಮೂರು ಸೀರೆಗಳು, ರೇಷ್ಮೆ ಸೀರೆಗಳು, ಕೊಪ್ಪಳದ ಕಿನ್ನಾಳ ಆಟದ ಸಾಮಗ್ರಿಗಳು, ಇಳಕಲ್ ಸೀರೆಗಳು, ವಿವಿಧ ನವಾಕರ್ಷಣೆಯ ಬಟ್ಟೆಗಳು, ಮಸಾಲಾ ಉತ್ಪನ್ನಗಳು, ನಾರಿನ ಉತ್ಪನ್ನದ ಬ್ಯಾಗ್‍ಗಳು, ಮೌಲ್ಯವರ್ಧಿತ ಕರಾವಳಿ ಉತ್ಪನ್ನಗಳು, ಸಿರಿ ಧಾನ್ಯ ಉತ್ಪನ್ನಗಳು ವಿವಿಧ ಬಗೆಯ ಖಾದಿ ಉತ್ಪನ್ನಗಳು ಗ್ರಾಹಕರನ್ನು ಸೆಳೆಯುತ್ತಿವೆ ಎಂದು ತಿಳಿಸಲಾಗಿದೆ.