ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಕತ್ರಾದಲ್ಲಿ ಇಂದು ಬೆಳ್ಳಂಬೆಳಗ್ಗೆ 3.6 ತೀವ್ರತೆಯ ಭೂಕಂಪನ ಸಂಭವಿಸಿದೆ.
ಮುಂಜಾನೆ 5:10ರ ಸುಮಾರಿಗೆ 10 ಕಿಮೀ ಆಳದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.
ಭೂಕಂಪನದ ಕೇಂದ್ರ ಬಿಂದು ಕತ್ರಾದಿಂದ ಪೂರ್ವಕ್ಕೆ 97 ಕಿಮೀ ದೂರದಲ್ಲಿ ಕಂಡುಬಂದಿದೆ. ಭೂಕಂಪದ ಅಕ್ಷಾಂಶ ಮತ್ತು ರೇಖಾಂಶಗಳು ಕ್ರಮವಾಗಿ 33.10 ಡಿಗ್ರಿ ಮತ್ತು 75.97 ಡಿಗ್ರಿಯಲ್ಲಿ ಕಂಡುಬಂದಿದೆ. ಸಾಮಾನ್ಯ ಭೂಕಂಪನ ಉಂಟಾಗಿರುವುದರಿಂದ ಯಾವುದೇ ಪ್ರಾಣಹಾನಿ, ಆಸ್ತಿಪಾಸ್ತಿ ಸಂಭವಿಸಿಲ್ಲ.
ಫೆಬ್ರವರಿ 6 ರಂದು ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ 7.8ರ ತೀವ್ರತೆಯ ಭೂಕಂಪನದಲ್ಲಿ ಸಾವಿನ ಸಂಖ್ಯೆ 41,000ಕ್ಕೆ ಏರಿಕೆಯಾಗಿದೆ. ಇನ್ನೂ ರಕ್ಷಣಾ ಕಾರ್ಯ ಮುಂದುವರೆದಿದೆ. ವಿಶ್ವಸಂಸ್ಥೆ ಭೂಕಂಪನದ ತೀವ್ರತೆಯನ್ನು ಕಂಡು 50,000 ಸಾವುಗಳು ಸಂಭವಿಸಬಹುದು ಎಂದು ಸೂಚಿಸಿತ್ತು.










