ಬೇರೆ ಯುವಕರ ಜೊತೆ ರೀಲ್ಸ್ ಮಾಡಿದ್ದಕ್ಕೆ ಪ್ರಿಯತಮೆ ಕೊಲೆಗೈದು, ಮೃತದೇಹ ಸುಟ್ಟು ಹಾಕಿದ ಪಾಗಲ್ ಪ್ರೇಮಿ!

90
firstsuddi

ಯಾದಗಿರಿ : ತಾನು ಪ್ರೀತಿಸುತ್ತಿದ್ದ ಯುವತಿಯನ್ನೇ ಪಾಗಲ್ ಪ್ರೇಮಿಯೊಬ್ಬ ಕೊಲೆಗೈದು, ಮೃತದೇಹವನ್ನು ಸುಟ್ಟು ಹಾಕಿರುವ ಘಟನೆ ತಾಲೂಕಿನ ಅರಕೇರಾದ ಪಂಚಶೀಲ ನಗರದ ಜಮೀನಿನಲ್ಲಿ ನಡೆದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಮೃತ ಯುವತಿಯನ್ನು 25 ವರ್ಷದ ಅಂತಿಮಾ ವರ್ಮಾ ಎಂದು ಗುರುತಿಸಲಾಗಿದ್ದು, ಆಕೆ ಮೂಲತಃ ಉತ್ತರ ಪ್ರದೇಶದ ಮೂಲದ ನಿವಾಸಿ ಎಂದು ತಿಳಿದುಬಂದಿದೆ. ಯಾದಗಿರಿಯ ಮಾರುತಿ ರಾಠೋಡ್, ಅಂತಿಮಾ ವರ್ಮಾಳನ್ನು ಕೊಲೆಗೈದ ಪಾಪಿ. ಮಹಾರಾಷ್ಟ್ರದ ಮುಂಬೈನಲ್ಲಿ ಸಹೋದರನೊಂದಿಗೆ ಅಂತಿಮಾ ವಾಸಿಸುತ್ತಿದ್ದಳು. ಈಕೆ ಸಾಮಾಜಿಕ ಜಾಲತಾಣದಲ್ಲಿ ಫುಲ್ ಆ್ಯಕ್ಟೀವ್ ಆಗಿದ್ದಳು. ಮುಂಬೈನಲ್ಲೇ ವಾಸವಿದ್ದ ಅಂತಿಮಾ ಮನೆ ಪಕ್ಕದಲ್ಲಿ ವಾಸವಾಗಿದ್ದ ಯಾದಗಿರಿ ತಾಲೂಕಿನ ಅರಕೇರಾದ ಪಂಚಶೀಲ ನಗರ ಮೂಲದ ಮಾರುತಿ ರಾಠೋಡ್ ಜೊತೆ ಪ್ರೀತಿ ಮೂಡಿತ್ತು. ಮುಂಬೈನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಾರುತಿ ಹಾಗೂ ಅಂತಿಮಾ ಇಬ್ಬರೂ 2 ವರ್ಷಗಳಿಂದ ಪ್ರೀತಿಸುತ್ತಿದ್ದರು.

ಅಂತಿಮಾ ಬೇರೆ ಬೇರೆ ಸ್ನೇಹಿತರ ಜೊತೆ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವ ಚಾಳಿ ಹೊಂದಿದ್ದಳಂತೆ. ಆದರೆ ಬೇರೆ ಯುವಕರೊಂದಿಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕುವುದು ಪ್ರೇಮಿ ಮಾರುತಿಗೆ ಇಷ್ಟ ಆಗುತ್ತಿರಲಿಲ್ಲ ಎನ್ನಲಾಗಿದೆ. ಇದೇ ಕಾರಣಕ್ಕೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ಇದರ ನಡುವೆ ತಾನು ಪ್ರೀತಿ ಮಾಡುತ್ತಿರುವ ಅಂತಿಮಾ ಎಲ್ಲಿ ತನಗೆ ಕೈಕೊಡುತ್ತಾಳೆಂದು ಶಂಕಿಸಿದ ಮಾರುತಿ, ಆಕೆಯನ್ನು ಏ. 2ರಂದು ತನ್ನೂರು ಯಾದಗಿರಿಗೆ ಕರೆದುಕೊಂಡು ಬಂದಿದ್ದಾನೆ.

ಊರಿಗೆ ಬರುತ್ತಿದ್ದಂತೆ ಬೇರೆ ಹುಡುಗರ ಜೊತೆ ವಿಡಿಯೋ ಮಾಡುವ ವಿಚಾರ ಕುರಿತಂತೆ ಜಗಳ ಮಾಡಿದ್ದಾನೆ. ಅಲ್ಲದೇ ಕೂಡಲೇ ಇಬ್ಬರು ಮದುವೆ ಆಗೋಣಾ ಅಂತ ಒತ್ತಾಯ ಮಾಡಿದ್ದನಂತೆ. ಇದಕ್ಕೆ ಒಪ್ಪದ ಕಾರಣ ಅಂತಿಮಾ ವರ್ಮಾ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ತನ್ನದೇ ಜಮೀನಿನಲ್ಲಿ ಪೆಟ್ರೋಲ್ ಹಾಕಿ ಮೃತದೇಹ ಸುಟ್ಟು ಹಾಕಿದ್ದಾನೆ. ಅಪರಿಚಿತ ಯುವತಿಯ ಶವ ಸಿಕ್ಕ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡಿದ್ದ ಗುರುಮಠಕಲ್ ಪೊಲೀಸರು ತನಿಖೆ ನಡೆಸಿ, ಆರೋಪಿ ಮಾರುತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆ ಸಂಬಂಧ ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.