ಬೆಂಗಳೂರು: ಲೈಂಗಿಕ ಕಿರುಕುಳ ನೀಡುತ್ತಿದ್ದ ರ್ಯಾಪಿಡೊ ಬೈಕ್ ಸವಾರನಿಂದ ತಪ್ಪಿಸಿಕೊಳ್ಳಲು ಯುವತಿಯೊಬ್ಬಳು ಚಲಿಸುತ್ತಿದ್ದ ಬೈಕ್ನಿಂದಲೇ ಜಿಗಿದಿರುವ ಘಟನೆ ನಗರದ ಯಲಹಂಕದ ಹೊರವಲಯದಲ್ಲಿ ನಡೆದಿದೆ.
ಖಾಸಗಿ ಕಂಪನಿಯಲ್ಲಿ ಆರ್ಕಿಟೆಕ್ಚರ್ ಆಗಿರುವ ಯುವತಿಯೊಬ್ಬಳು ಕಳೆದ ಏ. 21ರಂದು ರಾತ್ರಿ ಯಲಹಂಕದಿಂದ ಇಂದಿರಾನಗರಕ್ಕೆ ತೆರಳಲು ರ್ಯಾಪಿಡೊ ಬೈಕ್ ಬುಕ್ ಮಾಡಿದ್ದಾಳೆ. ನಿಗದಿತ ಸ್ಥಳಕ್ಕೆ ಬಂದ ಬೈಕ್ ಚಾಲಕ ಯುವತಿಯನ್ನು ಹತ್ತಿಸಿಕೊಂಡಿದ್ದಾನೆ. ಬೈಕ್ ಸವಾರ ಒಟಿಪಿ ಪರಿಶೀಲಿಸುವ ನೆಪದಲ್ಲಿ ಆಕೆಯ ಫೋನ್ ತೆಗೆದುಕೊಂಡು ಲೈಂಗಿಕ ಕಿರುಕುಳ ನೀಡಲು ಆರಂಭಿಸಿದ್ದಾನೆ.
ಬೈಕ್ ನಿಗದಿತ ಸ್ಥಳಕ್ಕೆ ಹೋಗದೆ ಇರುವುದನ್ನು ಗಮನಿಸಿದ ಯುವತಿ ಕೂಡಲೇ ಚಾಲಕನನ್ನು ಪ್ರಶ್ನಿಸಿದ್ದಾಳೆ. ಆದರೆ ಇದ್ಯಾವುದಕ್ಕೂ ಉತ್ತರಿಸದ ಆತ ಬೈಕ್ ವೇಗವನ್ನು ಹೆಚ್ಚಿಸಲು ಮುಂದಾಗಿದ್ದಾನೆ. ಇದರಿಂದ ಗಾಬರಿಗೊಂಡ ಯುವತಿ ಕೂಡಲೇ ಆತನ ಬಳಿಯಿದ್ದ ತನ್ನ ಫೋನ್ನನ್ನು ಕಸಿದುಕೊಂಡು, ಬಿಎಂಎಸ್ ಕಾಲೇಜು ಸಮೀಪ ಚಲಿಸುತ್ತಿದ್ದಾಗಲೇ ರ್ಯಾಪಿಡೊ ಬೈಕಿನಿಂದ ಜಿಗಿದಿದ್ದಾಳೆ.
ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಗೆ ಯುವತಿ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯಾದ ದೀಪಕ್ ರಾವ್ ನನ್ನು ಬಂಧಿಸಿದ್ದಾರೆ. ಯಲಹಂಕ ಉಪನಗರ ಪೊಲೀಸರಿಂದ ತನಿಖೆ ಮುಂದುವರಿದಿದೆ.










