ಬೆಂಗಳೂರು: ಸಿಎಂ ಬೊಮ್ಮಾಯಿಗೆ ನೈತಿಕತೆ ಇದ್ದರೆ ಕೂಡಲೇ ರಾಜೀನಾಮೆ ನೀಡಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ನಗರದ ಕೆಪಿಸಿಸಿ ಕಚೇರಿಯಲ್ಲಿ ಇಂದು ಕೆಲ ಬಿಜೆಪಿ ಮುಖಂಡರನ್ನು ಪಕ್ಷಕ್ಕೆ ಸೇರಿಸಿಕೊಂಡ ನಂತರ ಮಾತಾಡಿದ ಸಿದ್ದರಾಮಯ್ಯ, ಬಿಜೆಪಿ ಶಾಸಕ ಯಡಿಯೂರಪ್ಪ ಆಪ್ತ ಮಾಡಾಳ್ ವಿರೂಪಾಕ್ಷಪ್ಪ ಮಗನ ಮನೆಯಲ್ಲಿ 8 ಕೋಟಿ ಸಿಕ್ಕಿದೆ. ಇದು 40% ಕಮಿಷನ್ ಸರ್ಕಾರ ಎಂದು ಸಾಬೀತಾಗಿದೆ. ಇನ್ನೇನು ದಾಖಲೆಗಳು ಬೇಕು. ಮಾಡಾಳ್ ಅವರನ್ನು ರಕ್ಷಣೆ ಮಾಡುತ್ತಿದ್ದಾರೆ. ಅವರನ್ನು ಕೂಡಲೇ ಬಂಧನ ಮಾಡಬೇಕು. ಅವರು ಬೆಂಗಳೂರಿನಲ್ಲೇ ಇದ್ದಾರೆ ಎಂದು ಹೇಳಿದರು.
ಭ್ರಷ್ಟಾಚಾರ ರಕ್ಷಣೆಗೆ ಎಸಿಬಿ ರಚನೆ ಮಾಡಿದ್ರು ಎನ್ನುತ್ತಾರೆ. ಕನಿಷ್ಠ ಕಾನೂನು ಜ್ಞಾನ ಇದ್ದವರು ಹೀಗೆ ಮಾತನಾಡಲ್ಲ. ನಾವು ಲೋಕಾಯುಕ್ತ ಮುಚ್ಚುವ ಕೆಲಸ ಮಾಡಿಲ್ಲ. ಲೋಕಾಯುಕ್ತದಲ್ಲಿ ಭ್ರಷ್ಟಾಚಾರ ನಡೆದ ಕಾರಣ ಎಸಿಬಿ ರಚನೆ ಮಾಡಿದ್ದೆವು. ಎಸಿಬಿ ರದ್ದು ಮಾಡುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದ್ದರು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದಾಗ ರದ್ದು ಮಾಡಿಲ್ಲ. ಬಿಜೆಪಿ ಅಧಿಕಾರದಲ್ಲಿ ಇರುವ ರಾಜ್ಯದಲ್ಲಿ ಎಸಿಬಿ ಲೋಕಾಯುಕ್ತ ಇದೆ. ಅಲ್ಲಿ ಏಕೆ ಎಸಿಬಿ ರದ್ದು ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.










