ಚಿಕ್ಕಮಗಳೂರು : ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರ ಕುಟುಂಬದಲ್ಲಿ ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್‍ಗಾಗಿ ಜಟಾಪಟಿ ನಡೆಯುತ್ತಿದೆ. ಈ ನಡುವೆ ಭವಾನಿ ರೇವಣ್ಣಗೆ ಬಿಜೆಪಿಗೆ ಬರುವಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಆಫರ್ ನೀಡಿದ್ದಾರೆ.
ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಹೆಚ್.ಡಿ ಕುಮಾರಸ್ವಾಮಿ, ಭವಾನಿ ರೇವಣ್ಣ ಅವರ ಹೇಳಿಕೆಯನ್ನು ಗಮನಿಸಿದ್ದೇನೆ. ನಾನು ಮನೆಯಲ್ಲಿ ಜಗಳ ಹಚ್ವಲು ಬಯಸುವುದಿಲ್ಲ. ಭವಾನಿಯಕ್ಕ, ಹೊಳೆನರಸೀಪುರಕ್ಕೆ ನಿಮಗಿಂತ ಒಳ್ಳೆ ಅಭ್ಯರ್ಥಿ ಇಲ್ಲ. ನಿಮ್ಮ ಪಕ್ಷದಿಂದ ನೀವೇ ಒಳ್ಳೆ ಅಭ್ಯರ್ಥಿ ಎಂದು ಹೇಳೋಣ ಎಂದು ಮನಸ್ಸಲ್ಲಿತ್ತು. ಆದರೆ, ನಾನೇಕೆ ರೇವಣ್ಣ ಅವರು ಹಾಗೂ ಭವಾನಿ ಅಕ್ಕನ ಮಧ್ಯೆ ಜಗಳ ಹಚ್ಚಲಿ. ಹಾಗಾಗಿ ನಾನು ಏನೂ ಹೇಳಲ್ಲ ಎಂದು ಸಿಟಿ ರವಿ ಹೇಳಿದರು.
ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿದ ಅವರು, ಪಕ್ಷದ ನೀತಿ ಒಪ್ಪಿಕೊಂಡು ಬರುವವರು ಬರಬಹುದು. ಸುಮಲತಾ ಅಂಬರೀಶ್ ಅವರು ಜನಪ್ರಿಯ ನಾಯಕಿಯರಲ್ಲಿ ಒಬ್ಬರು. ಪಕ್ಷೇತರ ಅಭ್ಯರ್ಥಿಯಾಗಿ ಘಟಾನುಘಟಿಗಳ ಎದುರು ಗೆದ್ದಿದ್ದಾರೆ. ಸುಮಲತಾ ಬಿಜೆಪಿ ಸೇರ್ಪಡೆಯಾದರೆ ತುಂಬಾ ಸಂತೋಷವಾಗುತ್ತದೆ. ಅದರಿಂದ ಪಕ್ಷಕ್ಕೆ ಮತ್ತಷ್ಟು ಬಲ ಬರುತ್ತದೆ ಎಂದು ತಿಳಿಸಿದರು.