ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿಯವರು ಇಂದು ನೆಲಮಂಗಲದ ಮಾದವಾರದ ಬಳಿ ಇರುವ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ (ಬಿಐಇಎಸ್)ದಲ್ಲಿ ಭಾರತ ಇಂಧನ ಸಪ್ತಾಹ 2023ಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಟರ್ಕಿಯಲ್ಲಿ ಸಂಭವಿಸಿದ ಭೂಕಂಪದಿಂದ ಸಾಕಷ್ಟು ನೋವಾಗಿದೆ. ಸಾಕಷ್ಟು ಮಂದಿ ಸಾವನ್ನಪ್ಪಿದ್ದಾರೆ. ಅವರೊಂದಿಗೆ ಅವರೊಂದಿಗೆ ಎಲ್ಲ ಭಾರತೀಯರು ಜೊತೆಗಿದ್ದೇವೆ ಎಂದು ಭರವಸೆ ನೀಡಿದರು.
ಇದು ಭಾರತದಲ್ಲಿ ಜಿ-20 ಅಧ್ಯಕ್ಷತೆ ದೊರೆತ ನಂತರ ನಡೆಯುತ್ತಿರುವ ಮೊದಲ ಕಾರ್ಯಕ್ರಮ. ತಂತ್ರಜ್ಞಾನದ ರಾಜಧಾನಿ ಎನಿಸಿದ ಬೆಂಗಳೂರಿನಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಇಂಧನ ಕ್ಷೇತ್ರಕ್ಕೆ ಇಂದಿನ ದಿನಮಾನಗಳಲ್ಲಿ ಬಹಳ ಮಹತ್ವವಿದೆ. ಇಂಧನ ಉತ್ಪಾದನೆ ಮತ್ತು ವಿತರಣೆಯಲ್ಲಿ ಭಾರತವು ಇಂದು ವಿಶ್ವದ ಅತ್ಯಂತ ಮುಂದುರವರಿದ ಶಕ್ತಿಗಳ ಪೈಕಿ ಒಂದಾಗಿದೆ. ಐಎಂಎಫ್ 2023ರ ಪ್ರಗತಿಯ ಮುನ್ಸೂಚನೆ ಬಿಡುಗಡೆ ಮಾಡಿದೆ. ಇದರಲ್ಲಿ ಭಾರತವು ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳಲ್ಲಿ ಸ್ಥಾನ ಪಡೆದಿದೆ. ಮಹಾಮಾರಿ ಹಾಗೂ ಯುದ್ಧದ ಪ್ರಭಾವದ ನಡುವೆಯೂ ಭಾರತವು ಜಾಗತಿಕ ಆಶಾಕಿರಣ (ಬ್ರೈಟ್ ಸ್ಪಾಟ್) ಆಗಿದೆ. ಆಂತರಿಕ ಸತ್ವದಿಂದಾಗಿ ಭಾರತವು ಬಾಹ್ಯ ಒತ್ತಡಗಳನ್ನು ತಡೆದುಕೊಂಡಿದೆ ಎಂದರು.
ಭಾರತದಲ್ಲಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲ ಸ್ಥಿರ ಸರ್ಕಾರವಿದೆ. ಹೀಗಾಗಿಯೇ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಅಭಿವೃದ್ಧಿಗೆ ಪೂರಕವಾಗುವ ಹಲವು ಕ್ರಮಗಳನ್ನು ಜಾರಿಗೆ ತರಲಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಮಹತ್ವದ ಬದಲಾವಣೆಗಳು ಕಂಡು ಬಂದಿವೆ. ಅವುಗಳ ಫಲಾನುಭವಿಗಳ ಸಂಖ್ಯೆಯು ಹಲವು ಅಭಿವೃದ್ಧಿ ಹೊಂದಿದ ದೇಶಗಳ ಒಟ್ಟು ಜನಸಂಖ್ಯೆಗಿಂತಲೂ ಹೆಚ್ಚಾಗಿದೆ ಎಂದು ಹೇಳಿದರು.
ಇಂದು ದೇಶದಲ್ಲಿ ಕೋಟ್ಯಂತರ ಜನರ ಬದುಕಿನ ರೀತಿ ಬದಲಾಗಿದೆ. ಹಳ್ಳಿಹಳ್ಳಿಗಳಲ್ಲಿ ಇಂಟರ್ನೆಟ್ ತಲುಪಿದೆ. ಇದಕ್ಕಾಗಿ 5 ಲಕ್ಷ ಕಿಮೀಗೂ ಹೆಚ್ಚು ಉದ್ದದಷ್ಟು ಆಪ್ಟಿಕಲ್ ಫೈಬರ್ ಅಳವಡಿಸಲಾಗಿದೆ. ಬ್ರಾಡ್ಬಾಂಡ್ ಬಳಕೆದಾರರ ಸಂಖ್ಯೆ 13 ಪಟ್ಟು ಹೆಚ್ಚಾಗಿದೆ. ಇಂಟರ್ನೆಟ್ ಬಳಕೆ ಪ್ರಮಾಣ 3 ಪಟ್ಟು ಹೆಚ್ಚಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿಯೂ ಇಂಟರ್ನೆಟ್ ಬಳಕೆ ಹೆಚ್ಚಾಗಿದೆ. ಬಡವರ್ಗದಲ್ಲಿದ್ದವರು ಮಧ್ಯಮವರ್ಗಕ್ಕೆ ಬಂದಿದ್ದಾರೆ. ಮೊಬೈಲ್ ಫೋನ್ ಉತ್ಪಾದನೆಯಲ್ಲಿ ಭಾರತ ಮುಂಚೂಣಿಗೆ ಬಂದಿದೆ ಎಂದರು.
ನಮ್ಮ ಪೆಟ್ರೋಲಿಯಂ ಸಂಸ್ಕರಣಾಗಾರಗಳ ತಂತ್ರಜ್ಞಾನವನ್ನು ಮೇಲ್ದರ್ಜೆಗೆ ಏರಿಸುತ್ತಿದ್ದೇವೆ. ಇಲ್ಲಿ ಸ್ಟಾರ್ಟಪ್ ಗಳಿಗೆ ಹೆಚ್ಚು ಉತ್ತೇಜನವಿದೆ. ನೀವು ಇಲ್ಲಿನ ಇಂಧನ ಕ್ಷೇತ್ರದ ವಿಕಸನದ ಸಹಭಾಗಿಗಳಾಗಬಹುದು. ನೈಸರ್ಗಿಕ ಅನಿಲ ಕ್ಷೇತ್ರದಲ್ಲಿಯೂ ಸುಧಾರಣೆಗೆ ಸತತ ಪ್ರಯತ್ನ ನಡೆಯುತ್ತಿದೆ. ನಮ್ಮ ‘ಒನ್ ನೇಷನ್, ಒನ್ ಗ್ರಿಡ್’ ಆಶಯ ಸಾಕಾರಗೊಳಿಸಲು ಸತತ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದರು.
ಎನರ್ಜಿ ಟರ್ಮಿನಲ್ ಗಳ ಸಾಮರ್ಥ್ಯ ವೃದ್ಧಿಸಲಾಗುತ್ತಿದೆ. ಸಿಎನ್ ಜಿ ಸ್ಟೇಷನ್ ಗಳು 2014ರಲ್ಲಿ 900 ಮಾತ್ರವೇ ಇತ್ತು. ಆದರೆ ಈಗ 5000ಕ್ಕೆ ಮುಟ್ಟಿವೆ. ಗ್ಯಾಸ್ ಪೈಪ್ ಲೈನ್ ಜಾಲ ವಿಸ್ತರಿಸಲು ಶ್ರಮಿಸುತ್ತಿದ್ದೇವೆ. 2014ರಲ್ಲಿ 14 ಸಾವಿರ ಕಿಮೀ ಪೈಪ್ ಲೈನ್ ಇತ್ತು. ಈಗ 20 ಸಾವಿರ ಕಿಮೀ ದಾಟಿದೆ. ಶೀಘ್ರದಲ್ಲಿಯೇ ಇದು 35 ಸಾವಿರ ಕಿಮೀ ದಾಟಲಿದೆ. ಭಾರತವು ನಿಮ್ಮ ಹೂಡಿಕೆಗೆ ಅತ್ಯಂತ ಮಹತ್ವದ ಅವಕಾಶ ನೀಡಲಿದೆ. ಗ್ರೀನ್ ಹೈಡ್ರೋಜನ್ ಕ್ಷೇತ್ರದಲ್ಲಿ ಭಾರತವು ವಿಶ್ವದಲ್ಲಿಯೇ ಮುಂಚೂಣಿಯಲ್ಲಿದೆ. 2030ರ ಹೊತ್ತಿಗೆ 4 ಎಂಎಂಟಿ ಯಷ್ಟು ಗ್ರೀನ್ ಹೈಡ್ರೋಜನ್ ಉತ್ಪಾದಿಸುತ್ತೇವೆ. ಇದಕ್ಕಾಗಿ 8 ಲಕ್ಷ ಕೋಟಿಗೂ ಹೆಚ್ಚು ಹೂಡಿಕೆ ಮಾಡಲಿದ್ದೇವೆ ಎಂದರು.
ಪ್ಲಾಸ್ಟಿಕ್ ಬಾಟಲಿಗಳಿಂದ ನಾವು ರೂಪಿಸಿರುವ ಸಮವಸ್ತ್ರಗಳು ಯಾವುದೇ ರೀತಿಯಲ್ಲಿ ಗುಣಮಟ್ಟ ಅಥವಾ ಫ್ಯಾಷನ್ ವಿಚಾರದಲ್ಲಿ ಕಡಿಮೆಯಾಗಿಲ್ಲ. 10 ಕೋಟಿ ಪ್ಲಾಸ್ಟಿಕ್ ಬಾಟಲಿಗಳನ್ನು ಹೀಗೆ ಮರುಬಳಕೆ ಮಾಡಲಾಗುವುದು. ಇದರಿಂದ ಪರಿಸರ ಸಂರಕ್ಷಣೆ ಸಾಧ್ಯವಾಗುತ್ತದೆ. ಭಾರತದಲ್ಲಿ ಇಂಧನ ಕ್ಷೇತ್ರದಲ್ಲಿರುವ ಅವಕಾಶಗಳನ್ನು ಗಮನಿಸಿ, ಬಳಸಿಕೊಳ್ಳಿ. ನಿಮ್ಮ ಹೂಡಿಕೆಗೆ ಭಾರತವು ಅತ್ಯಂತ ಪ್ರಶಸ್ತ ತಾಣವಾಗಿದೆ ಎಂದು ತಿಳಿಸಿದರು.










