ಭಾರತದ 51ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿದ ನ್ಯಾ.ಸಂಜೀವ್ ಖನ್ನಾ.

11

ನವದೆಹಲಿ: ಭಾರತದ 51ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ.ಸಂಜೀವ್ ಖನ್ನಾ ಅವರು ಇಂದು ಪ್ರಮಾಣವಚನ ಸ್ವೀಕರಿಸಿದರು. ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ನ್ಯಾ.ಸಂಜೀವ್ ಖನ್ನಾ ಅವರಿಗೆ ಪ್ರಮಾಣವಚನ ಬೋಧಿಸಿದರು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್, ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
2019ರ ಜನವರಿವರೆಗೆ ದೆಹಲಿ ಹೈಕೋರ್ಟ್‍ನ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿರುವ ನ್ಯಾ.ಸಂಜೀವ್ ಖನ್ನಾ ಅವರು ದೆಹಲಿ ನ್ಯಾಯಾಂಗ ಅಕಾಡೆಮಿ, ದೆಹಲಿ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ ಮತ್ತು ಜಿಲ್ಲಾ ನ್ಯಾಯಾಲಯದ ಮಧ್ಯಸ್ಥಿಕೆ ಕೇಂದ್ರಗಳ ಅಧ್ಯಕ್ಷ/ಉಸ್ತುವಾರಿ ನ್ಯಾಯಾಧೀಶರ ಜವಾಬ್ದಾರಿಗಳನ್ನು ಹೊಂದಿದ್ದರು. ನ್ಯಾ.ಸಂಜೀವ್ ಅವರು ದೀರ್ಘಾವಧಿಯವರೆಗೆ ಆದಾಯ ತೆರಿಗೆ ಇಲಾಖೆಯ ಹಿರಿಯ ಸ್ಥಾಯಿ ಸಲಹೆಗಾರರಾಗಿದ್ದರು. 2004ರಲ್ಲಿ ದೆಹಲಿ ಸರ್ಕಾರದ ಸ್ಥಾಯಿ ಸಲಹೆಗಾರರಾಗಿ ನೇಮಕಗೊಂಡರು. ದೆಹಲಿ ಹೈಕೋರ್ಟ್‍ನಲ್ಲಿ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಮತ್ತು ಅಮಿಕಸ್ ಕ್ಯೂರಿಯಾಗಿ ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಹಾಜರಾಗಿದ್ದರು ಮತ್ತು ವಾದ ಮಂಡಿಸಿದ್ದರು.