ಮಂಡ್ಯ : ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತ – 400ಕ್ಕೂ ಹೆಚ್ಚು ಮನೆಗಳಿಗೆ ನೀರು…

69
firstsuddi

ಮಂಡ್ಯ : ಜಿಲ್ಲೆಯಲ್ಲಿ ಮೊನ್ನೆ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. 400ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.

ಮಳೆಯಿಂದ ಚರಂಡಿ, ಒಳಚರಂಡಿ ನೀರೆಲ್ಲವೂ ಮನೆಗಳಿಗೆ ನುಗ್ಗಿದೆ. ಒಳಚರಂಡಿ ಸಂಪೂರ್ಣವಾಗಿ ಅವ್ಯವಸ್ಥೆಯಿಂದ ಕೂಡಿದ್ದು, ಮಳೆ ನೀರು ಹರಿದು ಹೋಗಲು ಜಾಗವಿಲ್ಲದೇ, ನಿಂತಲ್ಲೇ ನಿಲ್ಲುವಂತಾಗಿದೆ. ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಬೀಡಿ ಕಾರ್ಮಿಕರ ಕಾಲೋನಿ ಅಕ್ಷರಶಃ ಕೆರೆಯಂತಾಗಿದೆ. ಸರಿಯಾದ ಒಳ ಚರಂಡಿ ಇಲ್ಲದ ಕಾರಣ ಈ ಬಡಾವಣೆಯ ಮನೆಗಳಿಗೆ ಪ್ರತಿ ಬಾರಿ ಮಳೆ ಬಂದಂತಹ ಸಂದರ್ಭದಲ್ಲಿ ಮಳೆಯ ನೀರು ನುಗ್ಗುತ್ತಿದೆ. ಇಲ್ಲಿನ ಜನರು ನಗರಸಭೆಗೆ ಎಷ್ಟೇ ಅರ್ಜಿಗಳನ್ನು ನೀಡಿದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕ್ಯಾರೆ ಎನ್ನುತ್ತಿಲ್ಲ.

ಮನೆಯೊಳಗಿನ ದವಸ-ಧಾನ್ಯಗಳು, ಬಟ್ಟೆ-ಬರೆ, ಹಾಸಿಗೆ, ಬೆಡ್ ಶೀಟ್‌ ಹೀಗೆ ಅಗತ್ಯ ವಸ್ತುಗಳನ್ನು ಸಂರಕ್ಷಿಸಿಕೊಳ್ಳಲಾಗದೇ ಇಡೀ ರಾತ್ರಿ ನರಕಯಾತನೆ ಅನುಭವಿಸಿದ್ದಾರೆ. ಮಳೆ ಅಬ್ಬರಕ್ಕೆ ವಿದ್ಯುತ್ ಕಡಿತಗೊಂಡಿದೆ. ದೊಡ್ಡಪಾಳ್ಯ, ಎಂ. ಶೆಟ್ಟಹಳ್ಳಿ, ಚಿಂದಗಿರಿ ಕೊಪ್ಪಲು, ಮಂಡ್ಯ ಕೊಪ್ಪಲು ಸೇರಿದಂತೆ ಇತರೆಡೆ ಸೇರಿ 13ಕ್ಕೂ ಹೆಚ್ಚು ಮನೆಗಳ ಗೋಡೆಗಳು ಭಾಗಶಃ ಕುಸಿದು ಬಿದ್ದಿವೆ. 100 ಎಕರೆಗೂ ಹೆಚ್ಚು ಬೆಳೆ ಹಾನಿಯಾಗಿದೆ.