ಮಕ್ಕಳು ಪರಿಸರ ಪ್ರೇಮವನ್ನು ಮೈಗೂಡಿಸಿಕೊಳ್ಳಬೇಕು : ಕೆ.ಟಿ.ರಾಧಾಕೃಷ್ಣ.

152
firstsuddi

ಚಿಕ್ಕಮಗಳೂರು : ಮಕ್ಕಳು ವಿದ್ಯಾರ್ಥಿ ದೆಸೆಯಲ್ಲೇ ಪರಿಸರ ಪ್ರೇಮವನ್ನು ಮೈಗೂಡಿಸಿಕೊಳ್ಳಬೇಕು ಎಂದು ಬಿಎಸ್‍ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಸಲಹೆ ನೀಡಿದರು.

ನಗರದ ಎಲೈಟ್ ಪದವಿಪೂರ್ವ ಕಾಲೇಜಿನಲ್ಲಿ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಇಂದು ಏರ್ಪಡಿಸಿದ್ದ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಾವು ಮಿತಿಮೀರಿದ ಸ್ವಾರ್ಥ ಮತ್ತು ದುರಾಸೆಯಿಂದಾಗಿ ಕಾಡುಗಳನ್ನು ಕಡಿದು ಬೆಟ್ಟ ಗುಡ್ಡಗಳನ್ನು, ಭೂಮಿಯನ್ನು ಬಗೆದು ನಾಶ ಮಾಡಿದ್ದೇವೆ, ಅದರ ಪರಿಣಾಮ ಜೀವಸಂಕುಲಗಳು ನಾಶವಾಗಿವೆ ಇದರಿಂದಾಗಿ ಪರಿಸರದಲ್ಲಿ ಅಸಮತೋಲನ ಉಂಟಾಗುತ್ತಿವೆ ಎಂದು ವಿಷಾದಿಸಿದರು.

ಪರಿಸರವನ್ನು ನಾಶ ಮಾಡಿದ ಪರಿಣಾಮ ಅತಿವೃಷ್ಠಿ, ಅನಾವೃಷ್ಠಿ, ಶಬ್ದಮಾಲಿನ್ಯ, ವಾಯುಮಾಲಿನ್ಯ, ಜಲಮಾಲಿನ್ಯ ಉಂಟಾಗಿದ್ದು, ಉಸಿರಾಡಲು ಶುದ್ದ ಆಮ್ಲಜನಕವನ್ನು ಹಣ ತೆತ್ತು ಕೊಂಡುಕೊಳ್ಳುವ ಹೀನಾಯ ಸ್ಥಿತಿಯಲ್ಲಿ ನಾವಿದ್ದೇವೆ, ಪರಿಸ್ಥಿತಿ ಇದೇ ರೀತಿ ಮುಂದುವರೆದಲ್ಲಿ ನಮ್ಮ ಮುಂದಿನ ಪೀಳಿಗೆಯ ಬದುಕು ನರಕ ಸದೃಶವಾಗುತ್ತದೆ ಎಂದು ಎಚ್ಚರಿಸಿದರು.

ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ಯು.ಆರ್.ಪ್ರದೀಪ್ ಮಾತನಾಡಿ ನಮ್ಮ ಮುಂದಿನ ಪೀಳಿಗೆ ನೆಮ್ಮದಿಯಿಂದ ಬದುಕಬೇಕಾದರೆ ನಾವು ಈಗಿನಿಂದಲೇ ಗಿಡಮರಗಳನ್ನು ನೆಟ್ಟು ಬೆಳೆಸಬೇಕು ಎಂದು ಕಿವಿಮಾತು ಹೇಳಿದರು.

ಕಾಲೇಜಿನ ನಿರ್ದೇಶಕ ಪಿ.ಕೆ.ಸಂತೋಷ್ ಮಾತನಾಡಿ ನಮ್ಮ ಸೈನಿಕರು ಜೀವದ ಹಂಗು ತೊರೆದು ದೇಶದ ಗಡಿಗಳನ್ನು ರಕ್ಷಿಸುತ್ತಿರುವುದರಿಂದಾಗಿ ನಾವು ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ ಹಾಗಾಗಿ ನಮ್ಮ ಯೋಧರ ತ್ಯಾಗ ಮತ್ತು ಬಲಿದಾನವನ್ನು ನಾವು ಸದಾ ಸ್ಮರಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಫ್ರಾನ್ಸಿಸ್ ಥಾಮಸ್ ವಿದ್ಯಾರ್ಥಿಗಳು ವಿದ್ಯೆಯ ಜೊತೆಗೆ ದೇಶಭಕ್ತಿ ಮತ್ತು ರಾಷ್ಟ್ರಪ್ರೇಮವನ್ನೂ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಗಿಲ್ ಯುದ್ದದಲ್ಲಿ ಹುತಾತ್ಮರಾದ ಸೈನಿಕರ ಆತ್ಮಕ್ಕೆ ಶಾಂತಿಕೋರಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು, ಯೋಧರ ಸ್ಮರಣಾರ್ಥ ಕಾಲೇಜಿನ ಆವರಣದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡಲಾಯಿತು.

ಬಿಎಸ್‍ಪಿ ತಾಲ್ಲೂಕು ಅಧ್ಯಕ್ಷ ಹರೀಶ್ ಮಿತ್ರ, ಜಿಲ್ಲಾ ಸಹೋದರತ್ವ ಸಮಿತಿಯ ಅಧ್ಯಕ್ಷೆ ಕೆ.ಬಿ.ಸುಧಾ, ಕಾರ್ಯದರ್ಶಿ ಕೆ.ಎಸ್.ಮಂಜುಳಾ, ಕಾಲೇಜಿನ ಸಂಯೋಜಕ ಸುರೇಶ್, ಉಪನ್ಯಾಸಕರಾದ ಗೀತ, ದೀಪಿಕ, ಮಮತ ಉಪಸ್ಥಿತರಿದ್ದರು.