ಮಕ್ಕಳ ವಿರುದ್ಧ ಹೋರಾಡಿ ಮರಳಿ ಆಸ್ತಿ ಪಡೆದುಕೊಂಡ ವೃದ್ಧ ತಾಯಿ!

68
firstsuddi

ಹಾವೇರಿ : ಆಸ್ತಿಯನ್ನು ತಮ್ಮ ಹೆಸರಿಗೆ ಬರೆಸಿಕೊಂಡು ಹೆತ್ತ ತಾಯಿಯನ್ನ ಮನೆಯಿಂದ ಹೊರಹಾಕಿದ್ದ ಮಕ್ಕಳ ವಿರುದ್ಧವೇ ಹೋರಾಡಿ ಜಯ ಸಾಧಿಸಿದ್ದಾರೆ. ಈ ಘಟನೆ ಜಿಲ್ಲೆಯ ಹಾನಗಲ್ ತಾಲೂಕಿನ ವೀರಾಪುರ ಗ್ರಾಮದಲ್ಲಿ ನಡೆದಿದೆ.

76 ವರ್ಷದ ಪ್ರೇಮವ್ವ ಹವಳಣ್ಣನವರಿಗೆ ಇಬ್ಬರು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಪತಿ ಶ್ರೀಕಾಂತ ನಿಧನರಾದ ನಂತರ ಪತಿ ಹೆಸರಿನಲ್ಲಿದ್ದ 3 ಎಕರೆ 32 ಗುಂಟೆ ಜಮೀನನ್ನು ಇಬ್ಬರು ಗಂಡು ಮಕ್ಕಳಾದ ಧನಿಕುಮಾರ ಮತ್ತು ಸಂತೋಷ ತಮ್ಮ ಹೆಸರಿಗೆ ಮಾಡಿಕೊಂಡಿದ್ದರು. ಅಲ್ಲದೇ ಗ್ರಾಮದಲ್ಲಿದ್ದ ಎರಡೂ ಮನೆಗಳನ್ನ ತಮ್ಮ ಹೆಸರಿಗೆ ಮಾಡಿಕೊಂಡು ಹೆತ್ತ ತಾಯಿಗೆ ಕಿರುಕುಳ ನೀಡಿ ತಾಯಿಯನ್ನ ಮನೆಯಿಂದ ಹೊರಹಾಕಿದ್ದರು.

ಒಂದೂವರೆ ವರ್ಷ ಅಲ್ಲಿ ಇಲ್ಲಿ ಅಲೆದಾಡಿ ನಂತರ ಹಾವೇರಿಯ ಈಡಾರಿ ಸಂಸ್ಥೆಯ ಮಹಿಳಾ ಸಾಂತ್ವನ ಕೇಂದ್ರ ಸೇರಿದ್ದ ಪ್ರೇಮವ್ವ ಸಾಂತ್ವನ ಕೇಂದ್ರದ ನೆರವಿನಿಂದ ಸವಣೂರು ಉಪವಿಭಾಗಾಧಿಕಾರಿಗೆ ಆಸ್ತಿ ಬಿಡಿಸಿಕೊಡುವಂತೆ ಅರ್ಜಿ ಸಲ್ಲಿಸಿದ್ದರು. ಅದರಂತೆ ವಿಚಾರಣೆ ನಡೆಸಿದ ಅಧಿಕಾರಿಗಳು ಮಕ್ಕಳಿಂದ ತಾಯಿಯ ಹೆಸರಿಗೆ ಜಮೀನು ಮತ್ತು ಮನೆ ಬಿಡಿಸಿಕೊಟ್ಟಿದ್ದಾರೆ. ಸದ್ಯ ಹಾನಗಲ್ ತಹಶೀಲ್ದಾರ್ ಎರ್ರಿಸ್ವಾಮಿ.ಪಿ.ಎಸ್ ರಿಂದ ಮಹಿಳಾ ಸಾಂತ್ವನ ಕೇಂದ್ರದ ಮುಖ್ಯಸ್ಥೆ ಸಮ್ಮುಖದಲ್ಲಿ ಪ್ರೇಮವ್ವಳಿಗೆ ದಾಖಲೆಗಳ ವಿತರಣೆ ಮಾಡಲಾಗಿದೆ. ಆಸ್ತಿಮರಳಿಸಿದ ಅಧಿಕಾರಿಗಳಿಗೆ ಪ್ರೇಮವ್ವ ಧನ್ಯವಾದ ತಿಳಿಸಿದ್ದಾರೆ.