ಮಗಳನ್ನು ಪ್ರೀತಿಸುತ್ತಿದ್ದ ಯುವಕನಿಗೆ ಚಾಕು ಇರಿದ ತಂದೆ…

62
firstsuddi

ಧಾರವಾಡ: ತನ್ನ ಮಗಳನ್ನು ಪ್ರೀತಿಸುತ್ತಿದ್ದ ಯುವಕನಿಗೆ ತಂದೆ ಚಾಕುವಿನಿಂದ ಇರಿದ ಘಟನೆ ಜಿಲ್ಲೆಯ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸೈದಾಪುರ ಬಡಾವಣೆಯಲ್ಲಿ ನಡೆದಿದೆ.

ಶಶಾಂಕ್ ಮೂಗನ್ನವರ ಚಾಕು ಇರಿತಕ್ಕೆ ಒಳಗಾದ ಯುವಕ. ಸದ್ಯ ಶಶಾಂಕ್​ನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.

ಚಾಕು ಚುಚ್ಚಿದ ಯುವತಿಯ ತಂದೆಯನ್ನು ಹುಲಗಪ್ಪ ಬಡಿಗೇರ ಎಂದು ಗುರುತಿಸಲಾಗಿದೆ. ಹುಲಗಪ್ಪನ ಮಗಳನ್ನು ಶಶಾಂಕ್ ಪ್ರೀತಿ ಮಾಡುತ್ತಿದ್ದನು. ಈ ಯುವಕ ಗುಜರಿ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದನು. ಶ್ರೀಮಂತಿಕೆ ಇರದಿದ್ದರೂ, ಜೀವನ ಮಾಡುವಷ್ಟು ಹಣವನ್ನು ಯುವಕ ಗಳಿಸುತ್ತಿದ್ದನು. ಆದರೆ, ಆತ ಸಮಾಜದಲ್ಲಿ ಮರ್ಯಾದೆ ಇಲ್ಲದ ಗುಜರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನೆಂದು ಕೋಪಗೊಂಡ ಯುವತಿಯ ತಂದೆ, ಯುವಕನಿರುವ ಸ್ಥಳಕ್ಕೆ ತೆರಳಿ ಸೀದಾ ಹೊಟ್ಟೆಗೆ ಚಾಕುವಿನಿಂದ ಚುಚ್ಚಿದ್ದಾನೆ.

ಇನ್ನು ತನ್ನ ಮಗಳನ್ನು ಗುಜರಿ ಅಂಗಡಿಯಲ್ಲಿ ಕೆಲಸ ಮಾಡುವ ಶಶಾಂಕ್ ಎಂಬ ಯುವಕ ಪ್ರೀತಿ ಮಾಡುತ್ತಿದ್ದು, ಇವನೊಂದಿಗೆ ಮಗಳು ಹೋದರೆ ಅವಳ ಜೀವನ ಸುಖವಾಗಿ ಇರುವುದಿಲ್ಲ. ಜೊತೆಗೆ, ಸಮಾಜದಲ್ಲಿ ತಮಗೆ ಮರ್ಯಾದೆಯೂ ಇರುವುದಿಲ್ಲ. ಉಳಿದ ಮಕ್ಕಳ ಮದುವೆ ಹಾಗೂ ಇತರೆ ಭವಿಷ್ಯಕ್ಕೂ ಇವರ ಪ್ರೀತಿಯಿಂದ ಸಮಸ್ಯೆ ಆಗಲಿದೆ ಎಂದು ಅರಿತು ಯುವತಿಯ ತಂದೆ ಹುಡುಗನನ್ನೇ ಕೊಲೆ ಮಾಡಲು ಮುಂದಾಗಿದ್ದಾರೆ.

ಘಟನೆ ಕುರಿತಂತೆ ಧಾರವಾಡ ಉಪನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.