ಮಗ, ಸೊಸೆಯ ವಿರುದ್ಧವೇ ಪೊಲೀಸ್ ಠಾಣೆ ಮೆಟ್ಟಿಲೇರಿದ ಹಿರಿಯ ನಟಿ ಶ್ಯಾಮಲಾದೇವಿ.

59
firstsuddi

ಕನ್ನಡ ಸಿನಿಮಾ ರಂಗದ ಹಿರಿಯ ನಟಿ ಶ್ಯಾಮಲಾದೇವಿ ತಮ್ಮ ಮಗ ಹಾಗೂ ಸೊಸೆಯ ವಿರುದ್ಧವೇ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನಟಿ ಶ್ಯಾಮಲಾದೇವಿ ಅವರಿಗೆ ನಿತಿನ್ ಮತ್ತು ಉಮಾ ಎಂಬ ಇಬ್ಬರು ಮಕ್ಕಳಿದ್ದಾರೆ. ಕೆಲ ವರ್ಷಗಳ ಹಿಂದೆ ಪುತ್ರ ನಿತಿನ್‌ಗೆ ನಿವೃತ್ತ ಪೊಲೀಸ್ ಅಧಿಕಾರಿಯ ಪುತ್ರಿ ಸ್ಮಿತಾ ಜೊತೆಗೆ ವಿವಾಹವಾಗಿತ್ತು. ಬಳಿಕ ಹೊಸ ಮನೆ ಖರೀದಿಸಿ, ಪುತ್ರ-ಸೊಸೆಯೊಂದಿಗೆ ವಾಸವಿದ್ದರು.

ಮದುವೆಯಾದ ಕೆಲವೇ ದಿನಕ್ಕೆ ಪುತ್ರ ಮತ್ತು ಸೊಸೆ ಮನೆಯನ್ನು ತಮ್ಮ ಹೆಸರಿಗೆ ಬರೆದುಕೊಡುವಂತೆ ಕಿರುಕುಳ ನೀಡಲು ಆರಂಭಿಸಿದ್ದರು. ಇದಕ್ಕೆ ಒಪ್ಪದಿದ್ದಾಗ, ಮಾನಸಿಕ ಹಾಗೂ ದೈಹಿಕವಾಗಿ ಹಲ್ಲೆ ಮಾಡಿದರು. ಈ ಬಗ್ಗೆ ಹಿರಿಯ ನಾಗರಿಕರ ವೇದಿಕೆಗೆ ದೂರು ನೀಡಿದ್ದೆ. ಈ ವೇಳೆ ಪುತ್ರ ನಿತಿನ್ ಕ್ಷಮೆಯಾಚಿಸಿದ್ದ.

ಇದಾದ ಕೆಲ ದಿನ ಸುಮ್ಮನಿದ್ದ ಪುತ್ರ ಮತ್ತು ಸೊಸೆ, ಮತ್ತೆ ಮನೆ ವಿಚಾರ ಪ್ರಸ್ತಾಪಿಸಿ ಕಿರುಕುಳ ನೀಡಲು ಆರಂಭಿಸಿದ್ದರು. ನನ್ನ ಹೆಸರಿಗೆ ಮನೆ ಬರೆದು ಕೊಡದಿದ್ದಲ್ಲಿ ಪತ್ನಿ ಕಡೆಯಿಂದ ವರದಕ್ಷಿಣೆ ಕಿರುಕುಳದಡಿ ಪೊಲೀಸ್ ಠಾಣೆಗೆ ದೂರು ಕೊಡಿಸುವುದಾಗಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಾನೆ. ಕೆಲಸದ ನಿಮಿತ್ತ ಲಂಡನ್‌ಗೆ ತೆರಳಿರುವ ಪುತ್ರಿ ಉಮಾಳನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಮನೆಯಲ್ಲಿ ಅಡುಗೆ ಮಾಡಲು ಅವಕಾಶ ನೀಡುತ್ತಿಲ್ಲ. ಮಲಗುವ ಕೋಣೆ ಸೇರಿದಂತೆ ಯಾವುದನ್ನೂ ಬಳಸಲು ಬಿಡುತ್ತಿಲ್ಲ. ಪುತ್ರ ಮತ್ತು ಸೊಸೆ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಮನೆ ಬಿಟ್ಟು ಹೋಗು ಎಂದು ಹಲ್ಲೆ ಮಾಡುತ್ತಿದ್ದಾರೆ. ಪ್ರತಿ ಕ್ಷಣವೂ ಮಾನಸಿಕ, ದೈಹಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಶ್ಯಾಮಲಾದೇವಿ ಅವರು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.