ಮದುವೆ ಪ್ರಸ್ತಾಪ ತಿರಸ್ಕರಿಸಿದ್ದಕ್ಕೆ ಟಿವಿ ನಿರೂಪಕನನ್ನು ಅಪಹರಿಸಿ ಜೈಲು ಸೇರಿದ ಮಹಿಳಾ ಉದ್ಯಮಿ…

37
firstsuddi

ಹೈದರಾಬಾದ್: ಮಹಿಳಾ ಉದ್ಯಮಿಯೊಬ್ಬಳು ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ್ದಕ್ಕೆ ಟಿವಿ ನಿರೂಪಕನನ್ನು ಅಪಹರಿಸಿ ಜೈಲು ಸೇರಿದ ಪ್ರಕರಣ ಹೈದರಾಬಾದ್‍ನಲ್ಲಿ ನಡೆದಿದೆ.

ಬಂಧಿತ ಆರೋಪಿಯನ್ನು ಭೋಗಿರೆಡ್ಡಿ ತ್ರಿಶಾ ಎಂದು ಗುರುತಿಸಲಾಗಿದೆ. ಆಕೆ ಐದು ಸ್ಟಾರ್ಟಪ್ ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕಿ ಎಂದು ತಿಳಿದು ಬಂದಿದೆ. ತ್ರಿಶಾ ಮ್ಯಾಟ್ರಿಮೋನಿಯಲ್ ವೆಬ್‍ಸೈಟ್‍ನಲ್ಲಿ ಟಿವಿ ಆ್ಯಂಕರ್‌ ಪ್ರಣವ್ ಎಂಬವರ ಪ್ರೊಫೈಲ್ ನೋಡಿ ಮದುವೆ ಪ್ರಸ್ತಾಪ ಮಾಡಿದ್ದಳು. ಈ ಪ್ರಸ್ತಾಪಕ್ಕೆ ಪ್ರಣವ್ ಕಡೆಯಿಂದಲೂ ಒಪ್ಪಿಗೆ ಸಿಕ್ಕಿತ್ತು. ಇದಾದ ಬಳಿಕ ಚಾಟಿಂಗ್ ಆರಂಭಿಸಿದ್ದಳು. ಆದರೆ ಆ ಖಾತೆದಾರನು ತನ್ನ ಸ್ವಂತ ಫೋಟೋದ ಬದಲಿಗೆ ಟಿವಿ ಆ್ಯಂಕರ್‌ ಫೋಟೋವನ್ನು ಮ್ಯಾಟ್ರಿಮೋನಿ ಸೈಟ್‌ನಲ್ಲಿ ಪ್ರೊಫೈಲ್ ಚಿತ್ರವಾಗಿ ಬಳಸಿಕೊಂಡಿದ್ದ ಎಂದು ತ್ರಿಶಾಗೆ ಹಲವು ತಿಂಗಳ ಬಳಿಕ ಗೊತ್ತಾಗಿದೆ.

ನಂತರ ಅವಳು ಪ್ರೊಫೈಲ್ ಮೂಲಕ ಟಿವಿ ನಿರೂಪಕನನ್ನು ಹುಡುಕಿ, ಆತನ ಫೋನ್ ನಂಬರ್ ಕೂಡ ಪಡೆದು ಇನ್‌ಸ್ಟೆಂಟ್ ಮೆಸೇಜಿಂಗ್ ಆಪ್ ಮೂಲಕ ಆ್ಯಂಕರ್‌ನನ್ನು ಸಂಪರ್ಕಿಸಿದಳು. ಮಹಿಳೆ, ಆ್ಯಂಕರ್‌ಗೆ ಸಂದೇಶ ಕಳುಹಿಸುವುದನ್ನು ಮುಂದುವರಿಸಿದ್ದಾಳೆ. ಮಹಿಳೆಯ ಕಾಟ ತಾಳಲಾರದೆ ನಿರೂಪಕ ನಂಬರ್ ಬ್ಲಾಕ್ ಮಾಡಿದ್ದಾನೆ. ಆದರೆ ಆ್ಯಂಕರ್‌ನನ್ನು ಮದುವೆಯಾಗಲು ನಿರ್ಧರಿಸಿದ್ದ ಮಹಿಳೆ, ಈ ಎಲ್ಲಾ ವಿಚಾರಗಳನ್ನು ಸರಿಪಡಿಸಬಹುದು ಎಂದು ಭಾವಿಸಿ ನಿರೂಪಕನನ್ನು ಅಪಹರಿಸಲು ಯೋಜಿಸಿದ್ದಳು.

ತನ್ನ ಯೋಜನೆಯಂತೆ ಅವಳು ಆ್ಯಂಕರ್‌ನನ್ನು ಅಪಹರಿಸಲು ನಾಲ್ಕು ಜನರನ್ನು ನೇಮಿಸಿಕೊಂಡಳು ಮತ್ತು ಅವನ ಚಲನವಲನಗಳನ್ನು ವೀಕ್ಷಿಸಲು ನಿರೂಪಕನ ಕಾರಿನಲ್ಲಿ ಟ್ರ್ಯಾಕಿಂಗ್ ಸಾಧನವನ್ನು ಅಳವಡಿಸಿದಳು. ಫೆಬ್ರವರಿ 11 ರಂದು, ನಾಲ್ವರು ಕಿಡ್ನಾಪರ್ಸ್ ನಿರೂಪಕನನ್ನು ಅಪಹರಿಸಿ ಮಹಿಳೆಯ ಕಚೇರಿಗೆ ಕರೆದೊಯ್ದು ಮನಬಂದಂತೆ ಕೆಟ್ಟದಾಗಿ ಥಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆದರಿಕೆ ಬಳಿಕ ಪ್ರಾಣಭಯದಿಂದ ಟಿವಿ ನಿರೂಪಕ ಮಹಿಳೆಯ ಕರೆಗಳಿಗೆ ಪ್ರತಿಕ್ರಿಯಿಸಲು ಒಪ್ಪಿಕೊಂಡರು. ಆ ಬಳಿಕವೇ ಕಿಡ್ನಾಪರ್ಸ್ ಆತನನ್ನು ಬಿಟ್ಟು ಮನೆಗೆ ಕಳುಹಿಸಿದ್ದಾರೆ. ಇದಾದ ಬಳಿಕ ಘಟನೆಗೆ ಸಂಬಂಧಿಸಿದಂತೆ ನಿರೂಪಕ ಪೊಲೀಸ್ ಠಾಣೆಗೆ ದೂರು ನೀಡಿದ್ದು, 363 (ಅಪಹರಣ), 341 (ತಪ್ಪು ತಿಳುವಳಿಕೆ), 342 (ಅಕ್ರಮ ಬಂಧನ), ಮತ್ತು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದಾದ ಬಳಿಕ ಮಹಿಳೆ ಮತ್ತು ನಾಲ್ವರು ಕಿಡ್ನಾಪರ್ಸ್‍ಗಳನ್ನು ಬಂಧಿಸಲಾಗಿದೆ.