ದರ್ಬಾಂಗ್ (ಬಿಹಾರ): ಬೆಂಕಿ ಅನಾಹುತದಿಂದ ಮದುವೆ ಮನೆ ಅಕ್ಷರಶಃ ಶೋಕದ ಮನೆಯಾಗಿ ಮಾರ್ಪಟ್ಟಿರುವ ಘಟನೆ ನಡೆದಿದೆ.
ಮದುವೆ ಮೆರವಣಿಗೆ ಸಂಭ್ರಮದಲ್ಲಿ ಹಚ್ಚಿದ್ದ ಪಟಾಕಿ ಕಿಡಿಯಿಂದ ಆದ ಅಗ್ನಿ ಅನಾಹುತದಲ್ಲಿ ನವ ದಂಪತಿ ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿರುವ ಘಟನೆ ದರ್ಬಾಂಗ್ನಲ್ಲಿ ನಡೆದಿದೆ.
ಬಹೇರಾ ಪೊಲೀಸ್ ಠಾಣೆಯ ಅಂತೋರ್ ಗ್ರಾಮದಲ್ಲಿ ಛಗನ್ ಪಾಸ್ವಾನ್ ಅವರ ಮಗಳ ಮದುವೆ ಸಮಾರಂಭ ಅದ್ದೂರಿಯಾಗಿ ಏರ್ಪಡಿಸಲಾಗಿತ್ತು. ಸಮಾರಂಭದ ಹಿನ್ನೆಲೆ ಮನೆಯ ಪಕ್ಕದಲ್ಲಿ ಅತಿಥಿಗಳು ತಂಗಲು ಮತ್ತು ಊಟದ ವ್ಯವಸ್ಥೆ ಮಾಡಲಾಗಿತ್ತು. ನಿನ್ನೆ ರಾತ್ರಿ ಮದುವೆ ಮೆರವಣಿಗೆ ಹಿನ್ನೆಲೆ ಸಂಭ್ರಮದಿಂದ ಪಟಾಕಿ ಹೊಡೆಯಲಾಗಿದ್ದು, ಇದರ ಕಿಡಿ ಹಾಕಿದ್ದ ಶಾಮೀಯಾನದ ಮೇಲೆ ಬಿದ್ದ ಪರಿಣಾಮ ಇಡೀ ಟೆಂಟ್ ಹೊತ್ತಿ ಉರಿದಿದೆ. ಈ ವೇಳೆ ಅಲ್ಲಿಯೇ ಇದ್ದ ಸಿಲಿಂಡರ್ ಮತ್ತು ಡೀಸೆಲ್ ಸಂಗ್ರಹಕ್ಕೂ ಕಿಡಿ ತಗುಲಿದ್ದು, ಭಾರೀ ಅನಾಹುತ ಸಂಭವಿಸಿತು. ಘಟನೆಯಲ್ಲಿ ಒಂದೇ ಕುಟುಂಬದ 6 ಮಂದಿ ಸಜೀವ ದಹನ ಆಗಿದ್ದಾರೆ.
ಘಟನೆ ಬೆಳಕಿಗೆ ಬಂದಾಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಅಗ್ನಿ ಶಾಮಕದಳ ಕೂಡ ಬೆಂಕಿ ಆರಿಸುವ ಯತ್ನದಲ್ಲಿ ನಿರತವಾಯಿತು.