ನವದೆಹಲಿ : ಸತ್ಯೇಂದ್ರ ಜೈನ್ ಮತ್ತು ಮನೀಶ್ ಸಿಸೋಡಿಯಾ ರಾಜೀನಾಮೆಯಿಂದ ತೆರವಾದ 2 ಸಚಿವ ಸ್ಥಾನಗಳನ್ನು ಭರ್ತಿ ಮಾಡಲು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿರ್ಧರಿಸಿದ್ದು, ಶಾಸಕರಾದ ಸೌರಭ್ ಭಾರದ್ವಾಜ್ ಮತ್ತು ಅತಿಶಿ ಹೆಸರನ್ನು ಲೆಫ್ಟಿನೆಂಟ್ ಗವರ್ನರ್ ವಿ.ಕೆ ಸಕ್ಸೆನಾ ಅವರಿಗೆ ಕಳುಹಿಸಿಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹೊಸ ಅಬಕಾರಿ ನೀತಿ ಹಗರಣದ ಆರೋಪ ಹೊತ್ತಿರುವ ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ನಿನ್ನೆ ತಮ್ಮ ಸಚಿವ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು. ಹೀಗಾಗಿ, ಸರ್ಕಾರದ ನಿರ್ವಹಣೆ ದೃಷ್ಟಿಯಿಂದ ಇಬ್ಬರು ಶಾಸಕರ ಹೆಸರನ್ನು ಸಚಿವ ಸ್ಥಾನಕ್ಕೆ ಶಿಫಾರಸು ಮಾಡಲಾಗಿದೆ.
ಮನೀಶ್ ಸಿಸೋಡಿಯಾ ಡಿಸಿಎಂ ಮಾತ್ರವಲ್ಲದೇ ಶಿಕ್ಷಣ, ಹಣಕಾಸು, ಯೋಜನೆ, ಭೂಮಿ ಮತ್ತು ಕಟ್ಟಡ, ಸೇವೆಗಳು, ಪ್ರವಾಸೋದ್ಯಮ, ಕಲೆ-ಸಂಸ್ಕೃತಿ ಮತ್ತು ಭಾಷೆ, ಕಾರ್ಮಿಕ ಮತ್ತು ಉದ್ಯೋಗ, ಆರೋಗ್ಯ, ಕೈಗಾರಿಕೆ, ವಿದ್ಯುತ್, ಗೃಹ, ನಗರಾಭಿವೃದ್ಧಿ, ನೀರಾವರಿ, ಲೋಕೋಪಯೋಗಿ ಸೇರಿ 18 ಇಲಾಖೆಗಳನ್ನು ನಿಭಾಯಿಸುತ್ತಿದ್ದರು. ಸತ್ಯೇಂದ್ರ ಜೈನ್ ಆರೋಗ್ಯ, ಗೃಹ, ಕೈಗಾರಿಕೆ ಸೇರಿದಂತೆ 7 ಖಾತೆಗಳನ್ನು ನಿರ್ವಹಿಸುತ್ತಿದ್ದರು. ಇಬ್ಬರ ರಾಜೀನಾಮೆ ಬಳಿಕ ಖಾತೆಗಳನ್ನು ಸಾರಿಗೆ ಸಚಿವ ಕೈಲಾಶ್ ಗೆಹ್ಲೋಟ್ ಮತ್ತು ಸಮಾಜ ಕಲ್ಯಾಣ ಸಚಿವ ರಾಜ್ ಕುಮಾರ್ ಆನಂದ್ ನಡುವೆ ಹಂಚಿಕೆ ಮಾಡಿದೆ.
ದೆಹಲಿ ಅಬಕಾರಿ ನೀತಿಯ ರಚನೆ ಮತ್ತು ಜಾರಿಯಲ್ಲಿ ಅಕ್ರಮ ಎಸಗಿರುವ ಆರೋಪದಡಿ ಭಾನುವಾರ ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಲಾಗಿತ್ತು. ಜೈನ್ ಅವರನ್ನು ಕಳೆದ ವರ್ಷ ಮೇ ತಿಂಗಳಲ್ಲಿ ಜಾರಿ ನಿರ್ದೇಶನಾಲಯದ(ಇಡಿ) ಅಧಿಕಾರಿಗಳು ಬಂಧಿಸಿದ್ದರು.










